ADVERTISEMENT

ನಾಮಪತ್ರ ಹಿಂಪಡೆಯಲು 27 ಕಡೆ ದಿನ

ಶಾಂತಿಯುತವಾಗಿ ನೆರವೇರಿದ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ, ಸ್ವೀಕೃತಿ ಕೇಂದ್ರಗಳ ಸುತ್ತ ಭಾರಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:53 IST
Last Updated 25 ಏಪ್ರಿಲ್ 2018, 12:53 IST
ನಾಮಪತ್ರ ಸಲ್ಲಿಸಿರುವವರ ವಿವರ
ನಾಮಪತ್ರ ಸಲ್ಲಿಸಿರುವವರ ವಿವರ   

ಶಿವಮೊಗ್ಗ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಭದ್ರಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರವೀಣ್ ಪಟೇಲ್‌, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್‌.ಎನ್. ನಿರಂಜನ್‌ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದರು.

ಮತ್ತೊಂದೆಡೆ ಜಿಲ್ಲಾಡಳಿತ, ನಗರ ಪಾಲಿಕೆ, ಒಲಿಂಪಿಕ್ ಅಸೋಸಿಯೇಷನ್‌ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದವು. ನಾಮಪತ್ರ ಹಿಂಪಡೆಯಲು ಏ. 27 ಕಡೆ ದಿನ.

ಮೆರವಣಿಗೆಯಲ್ಲಿ ಬಂದ ನಿರಂಜನ್‌: ಜೆಡಿಎಸ್ ಅಭ್ಯರ್ಥಿ ಎಚ್‌.ಎನ್.ನಿರಂಜನ್ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ADVERTISEMENT

ನಾಮಪತ್ರ ಸಲ್ಲಿಕೆಗೂ ಮೊದಲು ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದಿಂದ ಮೆರವಣಿಗೆ ಹೊರಟಿತು. ಬಿ.ಎಚ್. ರಸ್ತೆ, ನೆಹರು ರಸ್ತೆ ಮೂಲಕ ಗೋಪಿ ವೃತ್ತ ತಲುಪಿತು.

ಗೋಪಿವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ನಿರಂಜನ್, ಈಗಾಗಲೇ ಕ್ಷೇತ್ರದ ಪ್ರತಿ ಮನೆಗೂ ಭೆೇಟಿ ನೀಡಿದ್ದೇನೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸುವ ಭರವಸೆ ಮೂಡಿದೆ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಮೇಯರ್ ನಾಗರಾಜ್ ಕಂಕಾರಿ, ಮಾಜಿ ಮೇಯರ್ ಎನ್‌. ಏಳುಮಲೈ, ನಗರ ಪಾಲಿಕೆ ಸದಸ್ಯ ಎಚ್. ಫಾಲಾಕ್ಷಿ, ಮುಖಂಡರಾದ ಕಡಿದಾಳ್ ಗೋಪಾಲ್, ಹೆವೆನ್ ಹಬೀಬ್, ವಾಜೀದ್, ಆಯನೂರು ಶಿವಾನಾಯ್ಕ, ಶಾಂತಾ ಸುರೇಂದ್ರ, ಭಾಸ್ಕರ್, ಮಹೇಶ್, ಮಹಮದ್ ಯೂಸೂಫ್ ಬಯ್ಯಾ, ಜಿ.ಡಿ. ಮಂಜುನಾಥ್ ಹಾಜರಿದ್ದರು.
ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಮತದಾರರ ಜಾಗೃತಿಗಾಗಿ ಮ್ಯಾರಥಾನ್ ಓಟ:

ಎಲ್ಲ ಮತದಾರರೂ ಮೇ 12ರಂದು ತಪ್ಪದೇ ಮತಚಲಾಯಿಸಬೇಕು ಎಂದು ನಗರ ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಕೋರಿದರು.

ನಗರಪಾಲಿಕೆ ಮತ್ತು ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮ್ಯಾರಾಥಾನ್ ಓಟ ಮತ್ತು ಸ್ಕೇಟಿಂಗ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಪ್ರದೇಶದ ಹಲವು ವಾರ್ಡ್‌ಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಶೇ 99ರಷ್ಟು ಮತದಾನ ಮಾಡಬೇಕು. ಅದಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅರ್ಹ ಮತದಾರರಿಗೆ ಮತದಾನದ ಮಹತ್ವ ತಿಳಿಸಿ ಮತದಾನಕ್ಕೆ ಪ್ರೇರೇಪಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಅದಕ್ಕಾಗಿ ಇಂತಹ ಅನೇಕ ರಚನಾತ್ಮಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮದು. ಅದರ ಯಶಸ್ವಿಗಾಗಿ ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್‌ ಕಾರ್ಯದರ್ಶಿ ಶಶಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಶಿವಯೋಗಿ ಎಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.