ADVERTISEMENT

ನೀತಿಬದ್ಧ ಪ್ರಾದೇಶಿಕ ಪಕ್ಷ ಕೊರತೆ: ಗೊರುಚ

ಕೇಂದ್ರ, ರಾಜ್ಯ ಸಂಬಂಧ-ಮರುಚಿಂತನೆ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:55 IST
Last Updated 1 ಏಪ್ರಿಲ್ 2013, 8:55 IST

ಶಿವಮೊಗ್ಗ: ನೀತಿಬದ್ಧವಾದ ಪ್ರಾದೇಶಿಕ ಪಕ್ಷಗಳು ನಮ್ಮಲ್ಲಿ ಇಲ್ಲ; ಸಮಾನ ದೃಷ್ಟಿಯಿಂದ ನೋಡುವ ಕೇಂದ್ರವೂ ದೆಹಲಿಯಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ಸಂಬಂಧ ಕುರಿತಂತೆ ಮರು ಚಿಂತನೆಯ ಅಗತ್ಯ ಎದ್ದು ಕಾಣುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಭಾನುವಾರ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹುಣಸಘಟ್ಟ ಎಚ್.ಎಂ. ಮಲ್ಲಿಕಾರ್ಜುನಪ್ಪ ಸೇವಾ ಪ್ರತಿಷ್ಠಾನ ದತ್ತಿ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯಗಳ ಸಂಬಂಧ- ಮರುಚಿಂತನೆ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಶಕ್ತವಾದ ಕೇಂದ್ರ ಇರಬೇಕಾದರೆ, ಸಶಕ್ತವಾದ ರಾಜ್ಯ ಇರಬೇಕು. ಕೇಂದ್ರ, ರಾಜ್ಯ ತನ್ನ ಅಧೀನ ವ್ಯವಸ್ಥೆ ಎಂದು ಪರಿಗಣಿಸಿದ್ದರಿಂದ ಇಂದು ಕೇಂದ್ರ-ರಾಜ್ಯಗಳ ಸಂಬಂಧಗಳ ಚರ್ಚೆ ನಡೆದಿದೆ ಎಂದರು.

ದೇಶದ ಒಟ್ಟು ದೃಷ್ಟಿಯಿಂದ ತೆಗೆದುಕೊಳ್ಳುವ ತೀರ್ಮಾನಗಳನ್ನೂ ಪ್ರಾದೇಶಿಕ ಪಕ್ಷಗಳು ಅಲ್ಲಾಡಿಸುತ್ತಿರುವುದು ದುರಂತ ಎಂದ ಅವರು, ಸಂವಿಧಾನದಲ್ಲಿ ದೋಷ ಇಲ್ಲ. ಅದರ ನಿರ್ವಹಣೆಯಲ್ಲಿ ಕೊರತೆ ಇದೆ. ರಾಜಕೀಯ ಪಕ್ಷಗಳ ವ್ಯಾಖ್ಯಾನಕಾರರಿಂದಾಗಿ ಸಂವಿಧಾನ ಬಿಕ್ಕಟ್ಟಿನಲ್ಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ಸಮ್ಮಿಶ್ರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧದ ಚರ್ಚೆ ನಡೆಯುತ್ತದೆ. ಗಟ್ಟಿ ಸರ್ಕಾರ ಬಂದಿದ್ದರೆ ಈ ರೀತಿಯ ಚರ್ಚೆಗಳು ಆಗುತ್ತಿರಲಿಲ್ಲ. ವಿವಿಧತೆಯಲ್ಲೂ ಏಕತೆ ಸಾಧಿಸಿರುವುದು ಒಕ್ಕೂಟದ ವ್ಯವಸ್ಥೆಯ ಹೆಚ್ಚುಗಾರಿಕೆ ಎಂದರು.

ಆಶಯ ಭಾಷಣ ಮಾಡಿದ ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ವೀರಣ್ಣ, ಒತ್ತಡದ ಮೂಲಕ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಿರುಚಾಡುವವರಿಗೆ ಸ್ಥಾನಮಾನ, ಸೌಲಭ್ಯಗಳು ಸಿಗುತ್ತಿವೆ. ಕರ್ನಾಟಕ ರಾಜ್ಯಕ್ಕೆ ಮೊದಲಿನಿಂದಲೂ ಮಲತಾಯಿ ಧೋರಣೆ ಆಗಿದೆ. ಶಾಸ್ತ್ರೀಯ ಸ್ಥಾನಮಾನ, ಕಾವೇರಿ ನದಿ ನೀರು ಹಂಚಿಕೆ, ಈ ಎಲ್ಲದರಲ್ಲೂ ತಾರತ್ಯಮವಾಗಿದೆ ಎಂದರು.

ದತ್ತಿ ದಾನಿ ಎಚ್.ಎಂ. ಮಲ್ಲಪ್ಪ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜಿ.ಪಿ. ಚಿಕ್ಕಕರಿಯಪ್ಪ ಸ್ವಾಗತಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಕತ್ತಿಗೆ ಚನ್ನಪ್ಪ ಉಪಸ್ಥಿತರಿದ್ದರು.

ಡಾ.ಶ್ರೀಕಂಠ ಕೂಡಿಗೆ, ಡಾ.ಸಿದ್ದನಗೌಡ ಪಾಟೀಲ, ಕೆ. ಮುಕುಡಪ್ಪ ಮತ್ತಿತರರು ವಿಚಾರ ಮಂಡಿಸಿದರು.

ಚಂಪಾ ವಿರುದ್ಧ ಪರೋಕ್ಷ ಟೀಕೆ
ವಿಚಾರ ಸಂಕಿರಣ ಉದ್ಘಾಟಿಸಿದ ಸಾಹಿತಿ ಡಾ.ಪಿ.ವಿ. ನಾರಾಯಣ ಮಾತನಾಡಿ, ಈ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಅಸಮಾನತೆ ವಿರುದ್ಧ ಸಿಡಿದು ನಿಲ್ಲಲು ಸಮರ್ಥ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ಆದರೆ, ಈಗಿರುವ ಪ್ರಾದೇಶಿಕ ಪಕ್ಷಗಳಿಗೆ ನಿಜವಾದ ಕಾಳಜಿಗಳೇ ಅಲ್ಲ ಎಂದರು.

ಇಂತಹ ಪಕ್ಷಗಳ ಬಾಲ ಹಿಡಿದು ಕನ್ನಡದ ಕೆಲ ಸಾಹಿತಿಗಳು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಈಚೆಗೆ ಕೆಜೆಪಿ ಸೇರ್ಪಡೆಗೊಂಡ ಪ್ರೊ.ಚಂದ್ರಶೇಖರ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.