ADVERTISEMENT

ಪ್ರೇಕ್ಷಕರಿಗೆ ಆಪ್ತವಾಗುವ ಸಣ್ತಿಮ್ಮಿ ರಂಗಪ್ರಯೋಗ

‘ಸಣ್ತಿಮ್ಮಿ ಪುರಾಣ’ ಪುಸ್ತಕ ಬಿಡುಗಡೆಯಲ್ಲಿ ಟಿ.ಪಿ.ಭಾಸ್ಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 12:05 IST
Last Updated 9 ಏಪ್ರಿಲ್ 2018, 12:05 IST
ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ದು.ಸರಸ್ವತಿ ಅವರ ‘ಸಣ್ತಿಮ್ಮಿ ಪುರಾಣ’ ಏಕವ್ಯಕ್ತಿ ನಾಟಕಗಳ ಸಂಗ್ರಹ ಪುಸ್ತಕ ಬಿಡುಗಡೆಗೊಳಿಸಲಾಯಿತು. ರೇಖಾಂಬ, ದು.ಸರಸ್ವತಿ, ಎಚ್‌.ಎಸ್‌.ಅನುಪಮಾ, ಸಬಿತಾ ಬನ್ನಾಡಿ ಇದ್ದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ದು.ಸರಸ್ವತಿ ಅವರ ‘ಸಣ್ತಿಮ್ಮಿ ಪುರಾಣ’ ಏಕವ್ಯಕ್ತಿ ನಾಟಕಗಳ ಸಂಗ್ರಹ ಪುಸ್ತಕ ಬಿಡುಗಡೆಗೊಳಿಸಲಾಯಿತು. ರೇಖಾಂಬ, ದು.ಸರಸ್ವತಿ, ಎಚ್‌.ಎಸ್‌.ಅನುಪಮಾ, ಸಬಿತಾ ಬನ್ನಾಡಿ ಇದ್ದರು.   

ಶಿವಮೊಗ್ಗ: ‘ಸಣ್ತಿಮ್ಮಿ ಪುರಾಣ’ ಪುಸ್ತಕವು ಗಂಭೀರವಾದ ಮತ್ತು ಸಂಕೀರ್ಣವಾದ ವಿಷಯಗಳನ್ನು ಚರ್ಚಿಸುತ್ತದೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯೆ ರೇಖಾಂಬ ಅಭಿಪ್ರಾಯಪಟ್ಟರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದು.ಸರಸ್ವತಿ ಅವರ ‘ಸಣ್ತಿಮ್ಮಿ ಪುರಾಣ’ ಏಕವ್ಯಕ್ತಿ ನಾಟಕಗಳ ಸಂಗ್ರಹ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದು.ಸರಸ್ವತಿ ಅವರು ‘ಸಣ್ತಿಮ್ಮಿ’ ಎಂಬ ಸಾಮಾನ್ಯ ಪಾತ್ರದ ಮೂಲಕ ಬಹಳ ದೊಡ್ಡ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ. ಸಣ್ತಿಮ್ಮಿ ಎಂಬ ಅನಕ್ಷರಸ್ಥ  ಮಹಿಳಾ ಪಾತ್ರವು ವಿಶಿಷ್ಟವಾದ ಭಾಷೆಯ ಮೂಲಕ ಗಂಭೀರವಾದ ಮತ್ತು ಸಂಕೀರ್ಣವಾದ ವಿಷಯಗಳನ್ನು ಚರ್ಚಿಸುತ್ತದೆ.  ಸರಸ್ವತಿ ಅವರ ಒಡನಾಟದಿಂದಾಗಿ ತಮ್ಮೊಳಗೆ ಅನೇಕ ಬದಲಾವಣೆಗಳಾಗಿವೆ. ನಾಟಕದ ಪಾತ್ರವಾದ ಸಣ್ತಿಮ್ಮಿ ಮತ್ತು ಸರಸ್ವತಿ  ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದರು.

ADVERTISEMENT

ರಂಗ ಕಲಾವಿದ ಟಿ.ಪಿ.ಭಾಸ್ಕರ್‌ ಸಣ್ತಿಮ್ಮಿ ಪುರಾಣ ನಾಟಕ ಪ್ರದರ್ಶನದ ಕುರಿತು ಮಾತನಾಡಿ, ‘ಇತ್ತೀಚೆಗೆ ರಂಗ ಚಟುವಟಿಕೆಗಳು ತಾಂತ್ರಿಕ ಮತ್ತು ಯಾಂತ್ರಿಕ ಅನ್ನಿಸಿಕೊಳ್ಳುತ್ತಿದ್ದು, ಇದರಿಂದ ಸಮೂಹದ ಜತೆಗೆ ದೊಡ್ಡ ಅಂತರ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಸಿದ್ಧ ಚೌಕಟ್ಟುಗಳನ್ನು ಮೀರಿರುವ ಸಣ್ತಿಮ್ಮಿ ರಂಗಪ್ರಯೋಗ ಪ್ರೇಕ್ಷಕರಿಗೆ ಹೆಚ್ಚು ಆಪ್ತ’ ಎಂದರು.

ಪ್ರಭುತ್ವದ ಶಕ್ತಿಗಳು ನಿರೂಪಿಸುತ್ತಿರುವ ಕಥನಗಳಿಂದ ವಂಚನೆಗೆ ಒಳಗಾಗುತ್ತಲೇ ಇರುವ ಜನ ಸಮೂಹಗಳ ಪ್ರತಿನಿಧಿಯಾಗಿರುವ ಸಣ್ತಿಮ್ಮಿ ಪಾತ್ರ ಪ್ರಭುತ್ವದ ಕಥನಗಳನ್ನು ಪ್ರಶ್ನೆ ಮಾಡುತ್ತದೆ. ಸಮಸ್ಯೆಗಳನ್ನು ಜನ ಸಮೂಹದೊಂದಿಗೆ ಮುಖಾಮುಖಿಗೊಳಿಸುವ ದು.ಸರಸ್ವತಿ ಅವರ ತೀವ್ರ ಹಂಬಲವೇ ಈ ಸಣ್ತಿಮ್ಮಿ ನಾಟಕ ಹುಟ್ಟಲು ಪ್ರೇರಣೆ ಎಂದರು.

ಕನ್ನಡ ಪ್ರಾಧ್ಯಾಪಕಿ ಡಾ.ಸಬಿತಾ ಬನ್ನಾಡಿ ಸ ಮಾತನಾಡಿ, ‘ಸಣ್ತಿಮ್ಮಿ ಪುರಾಣವು ಇದುವರೆಗೂ ಕೇಳು ಪಠ್ಯವಾಗಿ, ನೋಡು ಪಠ್ಯವಾಗಿ ನಮ್ಮೊಳಗೆ ಸೇರಿಕೊಂಡಿದೆ. ಈಗ ಅದು ಓದು ಪಠ್ಯವಾಗಿ ನಮ್ಮ ನಡುವೆ ಅನಾವರಣಗೊಳ್ಳುತ್ತಿದೆ. ಈ ಪುಸ್ತಕದಲ್ಲಿ ಬರುವ ಸಣ್ತಿಮ್ಮಿ ಮತ್ತು ಪುರಾಣ ಎಂಬ ಪರಿಕಲ್ಪನೆಗಳು ಇಡೀ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ ಶ್ರಮ ಬಹಳ ಆಸಕ್ತಿದಾಯಕವಾದದ್ದು’ ಎಂದರು.

ಪುರಾಣ ಅನ್ನುವುದನ್ನು ಪಂಡಿತರು ಹೇಳಿದರೇ ಅದು ಪವಿತ್ರ ಮತ್ತು ಅದೊಂದು ಬದಲಾಯಿಸಲಾಗದ ಶಾಸನ ಆಗಿ ಬಿಡುತ್ತೆ. ಅದನ್ನೇ ಪಾಮರರು ಹೇಳಿದರೇ ಅದು ಎಂತದೋ ಕಂತೆ ಪುರಾಣ ಅನ್ನಿಸಿಕೊಳ್ಳುತ್ತದೆ. ಇದು ಹೀಗೆ ಅನ್ನಿಸಿಕೊಳ್ಳುವುದರಿಂದಲೇ ಇದಕ್ಕೊಂದು ಸ್ವಾಯತ್ತತೆ ಸಿಗುತ್ತದೆ. ಈ ಸ್ವಾಯತ್ತತೆಯನ್ನು ಜನಪದರು ನಿರಂತರವಾಗಿ ಕಾಪಾಡಿ ಕೊಂಡಿರುವುದರಿಂದಲೇ ಭಾರತದ ಪ್ರಜಾಪ್ರಭುತ್ವ ಇನ್ನೂ ಉಳಿದಿದೆ. ಸಣ್ತಮ್ಮಿ ಪುರಾಣ ಇಂತಹ ಪರಂಪರೆಯ ಮುಂದುವರಿಕೆಯ ಭಾಗವಾಗಿದೆ ಎಂದರು.

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರಾದ ಮೈತ್ರ, ಡಾ.ಎಚ್‌.ಎಸ್‌. ಅನುಪಮಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಣ್ತಿಮ್ಮಿ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.