ADVERTISEMENT

ಬೀದಿನಾಯಿ ಹಾವಳಿ ತಡೆಗೆ ಕ್ರಮ: ಮುಖ್ಯಾಧಿಕಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 9:58 IST
Last Updated 13 ಮಾರ್ಚ್ 2018, 9:58 IST

ಶಿರಾಳಕೊಪ್ಪ: ಪಟ್ಟಣದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಬೀದಿನಾಯಿ ಹಿಡಿಯುವ ಪರಿಣತರನ್ನು ಸಂಪರ್ಕಿಸಲಾಗಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭಿಸುವುದಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ ತಿಳಿಸಿದರು.

ಬೀದಿನಾಯಿಗಳ ಪಿಡುಗನ್ನು ನಿಯಂತ್ರಿಸುವಂತೆ ಜೆಡಿಎಸ್ ಟೌನ್‌ ಅಧ್ಯಕ್ಷ ಬೆಲವಂತನಕೊಪ್ಪ ರಾಘವೇಂದ್ರ ಸೋಮವಾರ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ತ್ಯಾಜ್ಯಗಳನ್ನು ಹೊರಗೆ ಬಿಸಾಡದಂತೆ ಮಾಂಸದ ಅಂಗಡಿಗಳಿಗೆ ಪಟ್ಟಣ ಪಂಚಾಯ್ತಿಯಿಂದ ಹಲವು ಬಾರಿ ಸೂಚಿಸಿದ್ದರೂ ಅಂಗಡಿ ಮಾಲೀಕರು ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ  ನೀಡಿದರು.

ADVERTISEMENT

ನಾಯಿ ಕಡಿತಕ್ಕೆ ಒಳಗಾಗಿದ್ದ ಲಕ್ಷ್ಮಣ ಕಲಾಲ್ ಅವರ ಮನೆಗೆ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ ಭೇಟಿ ನೀಡಿದರು. ನಂತರ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿದರು.  ‌

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಪಿ.ಜಾಫರ್, ಬೆಲವಂತನಕೊಪ್ಪ ರಾಘವೇಂದ್ರ, ಯುವ ಘಟಕದ ರವಿ, ಗಂಗಾಧರ್, ವಸಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.