ADVERTISEMENT

ಬೀಸನಗದ್ದೆ ಗ್ರಾಮಕ್ಕೆ ದೋಣಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:14 IST
Last Updated 6 ಜುಲೈ 2013, 5:14 IST

ಸಾಗರ: ತಾಲ್ಲೂಕಿನಲ್ಲಿ ಶುಕ್ರವಾರ ಅಲ್ಪ ಪ್ರಮಾಣದ ಮಳೆಯಾಗಿದ್ದು, ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಮಳೆಯ ಅಬ್ಬರ ಕಡಿಮೆಯಾಗಿದೆ.

ಮಳೆ ನಿಂತಿದ್ದರೂ, ಕಳೆದ ಮಂಗಳವಾರ ಹಾಗೂ ಬುಧವಾರ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಹಲವು ಗ್ರಾಮಗಳ ಕೃಷಿ ಭೂಮಿಯಲ್ಲಿ ನಿಂತಿರುವ ನೀರಿನ  ಪ್ರಮಾಣ ಕಡಿಮೆಯಾಗಿಲ್ಲ. ವರದಾ ನದಿ ಪ್ರವಾಹದಿಂದ ತಾಳಗುಪ್ಪ  ಹೋಬಳಿಯ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಜಲಾವೃತಗೊಂಡಿದ್ದು, ಗ್ರಾಮಸ್ಥರು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿರುವ ದೋಣಿ ಮೂಲಕ ಸಂಚರಿ ಸುತ್ತಿದ್ದಾರೆ.

ಬೀಸನಗದ್ದೆ ಗ್ರಾಮದಲ್ಲಿ 24 ಕುಟುಂಬಗಳು ವಾಸವಾಗಿದ್ದು ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರವಾಹದಿಂದ ನಾಗರಿಕ ಜಗತ್ತಿನ ಸಂಪರ್ಕ ಕಳೆದುಕೊಂಡು ಗ್ರಾಮ ದ್ವೀಪದಂತೆ ಆಗುವುದು ಮಾಮೂಲಾಗಿದೆ. ಬೆಳೆ ನಷ್ಟ ಅನುಭವಿಸುವ  ರೈತರಿಗೆ ಅತ್ಯಲ್ಪ ಪ್ರಮಾಣದ ಪರಿಹಾರ ನೀಡಲಾಗು ತ್ತಿದ್ದು, ಅದು ಕೂಡ ಸಕಾಲದಲ್ಲಿ ರೈತರಿಗೆ ತಲುಪುತ್ತಿಲ್ಲ ಎಂದು ದೂರುವ ಸೈದೂರು ಗ್ರಾಮ ಪಂಚಾಯ್ತಿ ಸದಸ್ಯ ಮಹಾಬಲೇಶ್ವರ ಜೆ. ನಾಯ್ಕ ಗ್ರಾಮಸ್ಥರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಪರಿಶೀಲನೆ
ಮಣಗದ್ದೆ ಗ್ರಾಮದಲ್ಲಿ ರೂ.40ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಬ್ಯಾರೇಜ್‌ಗೆ ವರದಾ ನದಿ ಪ್ರವಾಹದಿಂದ ಧಕ್ಕೆ ಉಂಟಾಗಿದೆ. ಈ ಭಾಗದಲ್ಲಿ ಸುಮಾರು 100 ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.  ಬಂದಗದ್ದೆ ಗ್ರಾಮದ ಮಠದ ಕೆರೆ ಕೋಡಿ ಒಡೆದು ಕೆಳದಿಯ ಹಿರೇಕೆರೆಗೆ ಇದರ ನೀರು ನುಗ್ಗಿದ್ದು ಮಳೆ ಮುಂದುವರಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕಲ್ಯಾಣಪುರ ಗ್ರಾಮದಲ್ಲಿ ಕೆರೆ ಒಡೆದು ಹಲವು ಕೃಷಿಕರ ಭೂಮಿಗೆ ನೀರು ನುಗ್ಗಿದೆ.

ತಾಳಗುಪ್ಪ ಹೋಬಳಿಯ 1100 ಎಕರೆ ಭತ್ತದ ಗದ್ದೆಯಲ್ಲಿ ಸಾಕಷ್ಟು ನೀರು ನಿಂತಿದ್ದು ಕೃಷಿ ಚಟುವಟಿಕೆಗೆ ತೊಡಕಾಗಿದೆ. ಮಳೆಯ ಪ್ರಮಾಣ ಗುರುವಾರ ಕಡಿಮೆಯಾಗಿರುವುದರಿಂದ ಈ ಭಾಗದಲ್ಲಿ ವರದಾ ನದಿಯ ಪ್ರವಾಹದ ಮಟ್ಟ ಕುಸಿದಿದೆ.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಸದಸ್ಯೆ ಶ್ವೇತಾ ಕಾಗೋಡು, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ರಾಮಕೃಷ್ಣ ಗುರುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.