ADVERTISEMENT

ಬೃಂದಾವನ ಮಾದರಿಯಲ್ಲಿ ಭದ್ರಾ ಉದ್ಯಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:55 IST
Last Updated 14 ಸೆಪ್ಟೆಂಬರ್ 2011, 5:55 IST
ಬೃಂದಾವನ ಮಾದರಿಯಲ್ಲಿ ಭದ್ರಾ ಉದ್ಯಾನ
ಬೃಂದಾವನ ಮಾದರಿಯಲ್ಲಿ ಭದ್ರಾ ಉದ್ಯಾನ   

ಶಿವಮೊಗ್ಗ: ಮೈಸೂರು ಬೃಂದಾವನ ಮಾದರಿಯಲ್ಲಿ ಭದ್ರಾ ಜಲಾಶಯದ ಕೆಳಭಾಗದಲ್ಲಿ ಉದ್ಯಾನ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವ ಸಲ್ಲಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಈಗಲೇ ಸೂಚಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.

ಭದ್ರಾ ಜಲಾಶಯಕ್ಕೆ ಮಂಗಳವಾರ ಕುಟುಂಬದೊಂದಿಗೆ ಬಾಗಿನ ಅರ್ಪಿಸಿದ ನಂತರ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ವಿವಿಧ 30 ಬೃಹತ್ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇದರಿಂದಾಗಿ 1.25ಲಕ್ಷ ಹೆಕ್ಟೇರ್ ಭೂಪ್ರದೇಶ ನೀರಾವರಿ ಸೌಲಭ್ಯ ಪಡೆದುಕೊಳ್ಳಲಿದೆ ಎಂದರು.

ಭದ್ರಾ ಜಲಾಶಯದಿಂದ ಜಲಾಶಯದ ವ್ಯಾಪ್ತಿಯಲ್ಲಿನ 1,05,570 ಎಕರೆ ಪ್ರದೇಶದ ಅಚ್ಚುಕಟ್ಟಿನ ರೈತರಿಗೆ ನೀರಿನ ಸೌಲಭ್ಯ ದೊರಕಲಿದೆ. ಅಲ್ಲದೇ, 39 ಮೆಗಾವ್ಯಾಟ್ ವಿದ್ಯುತ್ ಕೂಡ ಉತ್ಪಾದನೆಯಾಗಲಿದೆ ಎಂದ ಅವರು, ತುಂಗಾ-ಭದ್ರಾ, ಕಬಿನಿ ನದಿಗಳ ಆಧುನೀಕರಣದಿಂದ 8 ಟಿಎಂಸಿ ನೀರು ಉಳಿತಾಯವಾಗಲಿದ್ದು, 22,000 ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದರು.

ಪ್ರಸಕ್ತ ಸರ್ಕಾರವು ನೀರಾವರಿ ವಲಯಕ್ಕೆ ಆದ್ಯತೆ  ನೀಡಿದ್ದು, ಕಳೆದ ಸಾಲಿನಲ್ಲಿ ರೂ 6029 ಕೋಟಿ ವ್ಯಯಮಾಡಿತ್ತು. ವೈಜ್ಞಾನಿಕವಾಗಿ ನೀರು ಉಳಿಸುವ ಪ್ರಯತ್ನವಾಗಿ ಉತ್ತರ ಕರ್ನಾಟಕದ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ತರೀಕೆರೆ ಭಾಗದ ರೈತರಲ್ಲಿ ಗೊಂದಲಗಳಿವೆ. ಆದರೆ, ಯಾವುದೇ ರೈತರಿಗೆ ತೊಂದರೆಯಾಗದಂತೆ ಈ ಯೋಜನೆ ಅನುಷ್ಠಾನಗೊಳಿಸ ಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಭದ್ರಾ ಜಲಾಶಯದ ದ್ವೀಪದಲ್ಲಿರುವ ಜಂಗಲ್ ರೆಸಾರ್ಟ್‌ಗೆ ನಿರ್ಮಿಸಲಿರುವ ತೂಗು ಸೇತುವೆ ಕಾಮಗಾರಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್. ಸುರೇಶ್‌ಕುಮಾರ್, ತರೀಕೆರೆ ಶಾಸಕ ಸುರೇಶ್, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಜಿ. ಕುಮಾರಸ್ವಾಮಿ, ಕಡೂರು ಶಾಸಕ ಡಾ.ವೈ.ಸಿ. ವಿಶ್ವನಾಥ್, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶೇಖರಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಎಸ್. ಪದ್ಮನಾಭಭಟ್, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರಫುಲ್ಲಾ ಬಿ.ಮಂಜುನಾಥ್, ಡಾಟಿ ಸದಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.