ADVERTISEMENT

ಬ್ಯಾಂಕ್‌ ದೌರ್ಜನ್ಯ ಖಂಡಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 9:31 IST
Last Updated 19 ಡಿಸೆಂಬರ್ 2013, 9:31 IST

ಶಿವಮೊಗ್ಗ: ಸಾಲ ವಸೂಲಾತಿಗೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ರೈತನಿಗೆ ಸೂಕ್ತ ಪರಿಹಾರ ಹಾಗೂ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಬುಧವಾರ ಬಿ.ಎಚ್. ರಸ್ತೆಯ ಬ್ಯಾಂಕ್ ಆಫ್ ಬರೋಡ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಗುಳ್ಳೇಹಳ್ಳಿ ಗ್ರಾಮದ ಎಚ್.ಡಿ.ತೀರ್ಥಪ್ಪ ಎಂಬ ರೈತ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದು, ಮರು ಪಾವತಿ ಮಾಡುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿ ರೈತನ ಮೇಲೆ ಹಲ್ಲೆ ನಡೆಸಿ, ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದ ಅವರು,  ರೈತನ ಚಿಕಿತ್ಸಾ ವೆಚ್ಚವನ್ನು ಬ್ಯಾಂಕ್ ಭರಿಸಬೇಕು. ರೈತನಿಂದ ಜಪ್ತಿ ಮಾಡಲಾದ ಟ್ರ್ಯಾಕ್ಟರ್ ಹಿಂದಿರುಗಿಸಬೇಕು. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 


ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ಮುಖಂಡರಾದ ಕಡಿದಾಳು ಶಾಮಣ್ಣ, ಹಿಟ್ಟೂರು ರಾಜು, ವೈ.ಜಿ.ಮಲ್ಲಿಕಾರ್ಜುನ, ಸತೀಶ್, ವಸಂತ್ ಕುಮಾರ್, ರುದ್ರೇಶ್, ಶಿವಮೂರ್ತಿ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT