ADVERTISEMENT

ಭೂಮಿ, ಕೃಷಿ ಅಭಿವೃದ್ಧಿ ಮತ್ತು ಮಾರುಕಟ್ಟೆ ಪ್ರಾದೇಶಿಕ ಸಮ್ಮೇಳನ...........

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 9:30 IST
Last Updated 26 ಫೆಬ್ರುವರಿ 2011, 9:30 IST

ಸಾಗರ: ಅಮೆರಿಕ ಮಾದರಿಯ ಅಭಿವೃದ್ಧಿಗೆ ನಾವು ಮನಸೋತ ಕಾರಣ ಭೂಮಿ, ಕೃಷಿ ಹಾಗೂ ಅಭಿವೃದ್ಧಿ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಮಲೆನಾಡು ಅಭಿವೃದ್ಧಿಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಹೇಳಿದರು.ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ‘ಭೂಮಿ, ಕೃಷಿ ಅಭಿವೃದ್ಧಿ ಮತ್ತು ಮಾರುಕಟ್ಟೆ’ ಕುರಿತು ಎರಡು ದಿನಗಳ ಕಾಲ ಏರ್ಪಡಿಸಿರುವ ಪ್ರಾದೇಶಿಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣ ಎಂಬುದು ಸಹಜವಾಗಿ ವಿಕಾಸದ ರೂಪದಲ್ಲಿ ಬರದೇ ಇದ್ದಕ್ಕಿದ್ದಂತೆ ನಮ್ಮ ಮೇಲೆ ದಾಳಿಯ ರೂಪದಲ್ಲಿ ಎರಗಿದೆ. ನಾವಿದ್ದ ಬೆಳವಣಿಗೆಯ ಮಜಲು ಏನು ಎಂಬುದನ್ನು ನೋಡಿಕೊಳ್ಳದೇ ಹೊಸ ವ್ಯವಸ್ಥೆಗೆ ಒಡ್ಡಿಕೊಂಡಿದ್ದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನ್ಯಾಯವಾಗಿದೆ. ಜಾಗತೀಕರಣ ಬಾರಿಸಿದ ಅಭಿವೃದ್ಧಿಯ ಜಾಗಟೆಯೇ ಇಂದಿನ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಕೊಡಲಾರದ, ಕೊಟ್ಟರೂ ಪರಿಹಾರದ ಉತ್ತರದಾಯಿತ್ವ ಹೊರಲಾರದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಶದ ನೀತಿ-ನಿರೂಪಕರ ಚಿಂತನೆಗಳು ಕೂಡ  ಹೊರ ದೇಶದಿಂದ ರೂಪಿತವಾದರೆ ನಮ್ಮ ಕೃಷಿಯ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ಈ ಹಿಂದೆ ಯಾರು ದೈಹಿಕ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದರೋ ಅವರೆ ಅರ್ಥ ವ್ಯವಸ್ಥೆಯನ್ನು ರೂಪಿಸುತ್ತಿದ್ದರು. ಆದರೆ ಈಗ ಹಣದಿಂದಲೇ ಎಲ್ಲವನ್ನೂ ನಿರ್ವಹಿಸುವವರು ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.

ಹಣವೇ ಅಭಿವೃದ್ಧಿಯ ಮಾನದಂಡ ಆಗಿರುವುದರಿಂದ ಬದುಕಿನ ಸಹಜ ಸಂತೋಷ ಮಾಯವಾಗಿದೆ. ಜೀವನ ಸಂತೋಷ ಕೂಡ ಬೇರೊಬ್ಬರಿಂದ ನಿರ್ದೇಶಿತಗೊಳ್ಳುತ್ತಿದೆ ಎಂದರು.
‘ಭೂಮಿ ಮತ್ತು ವ್ಯವಸಾಯ’ ಕುರಿತು ಮೈಸೂರು ವಿವಿಯ ಪ್ರೊ.ಕೆ.ಸಿ. ಬಸವರಾಜು ಮಾತನಾಡಿ, ಕೃಷಿ ಕ್ಷೇತ್ರ ದುರ್ಬಲವಾಗಲು ಸಾರ್ವಜನಿಕ ಬಂಡವಾಳ ಅಲ್ಲಿಗೆ ಹರಿಯದಿರುವುದೇ ಕಾರಣ ಎಂಬುದನ್ನು 80ರ ದಶಕದ ಕೊನೆಯಲ್ಲಿ ಪ್ರತಿಪಾದಿಸಿದ್ದ ಡಾ.ಮನಮೋಹನ್ ಸಿಂಗ್ ಈಗ ಕೃಷಿಗೆ ಖಾಸಗಿ ಬಂಡವಾಳ ಹರಿಯಬೇಕು ಎಂಬ ದ್ರೋಹದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ವಿ. ಮೋಹನ್, ರವೀಂದ್ರ ಸಭಾಹಿತ್, ಅರ್ಥಶಾಸ್ತ್ರ ವಿಭಾಗದ ಡಾ.ಟಿ.ಎಸ್. ರಾಘವೇಂದ್ರ, ಎಚ್.ಬಿ. ಪುಟ್ಟಸ್ವಾಮಿ ಹಾಜರಿದ್ದರು.ಶೋಭಾ ಪ್ರಾರ್ಥಿಸಿದರು. ಬಿ.ಸಿ. ಶಶಿಧರ್ ಸ್ವಾಗತಿಸಿದರು. ಎಚ್.ಎಂ. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.