ADVERTISEMENT

ಭೂಮಿ ಹಕ್ಕಿನ ವಿಷಯದಲ್ಲಿ ದಲಿತರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:25 IST
Last Updated 7 ಫೆಬ್ರುವರಿ 2012, 10:25 IST

ಸಾಗರ: ದಲಿತರಿಗೆ ಭೂಮಿಯ ಹಕ್ಕು ದೊರಕದೇ ಇರುವುದು ಕೂಡ ದಲಿತ ಯುವಕರು ನಗರ ಪ್ರದೇಶಕ್ಕೆ ಗುಳೆ ಹೋಗಲು ಕಾರಣವಾಗಿದೆ ಎಂದು ಸೊರಬದ ಡಿಎಸ್‌ಎಸ್ ಮುಖಂಡ ರಾಜಪ್ಪ ಮಾಸ್ತರ್ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ `ಭೂ ಮಂಜೂರಾತಿ ಕಾಯ್ದೆ ದಕ್ಕಿದ್ದೆಷ್ಟು, ಮಿಕ್ಕಿದ್ದೆಷ್ಟು~ ಎಂಬ ವಿಷಯದ ಕುರಿತು ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶದ ಭೂಮಿಯನ್ನು ಸಮಾನವಾಗಿ ಹಂಚುವವರೆಗೂ ಸಮಾನತೆ ಬರಲಾರದು ಎಂಬ ಅಂಬೇಡ್ಕರ್ ಅವರ ಚಿಂತನೆ ಜಾರಿಗೆ ಬಂದಿದ್ದರೆ ದಲಿತರ ಸ್ಥಿತಿ ಉತ್ತಮವಾಗಿರುತ್ತಿತ್ತು. ಭೂಮಿ ಇಲ್ಲದ ವ್ಯಕ್ತಿಗೆ ಅಸ್ತಿತ್ವ ಹಾಗೂ ನೆಲೆಯೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಷಯದಲ್ಲಿ ಹೆಚ್ಚು ಅನ್ಯಾಯವಾಗಿರುವುದು ದಲಿತರಿಗೆ ಎಂದು ಪ್ರತಿಪಾದಿಸಿದರು.

ಭೂ ಸುಧಾರಣೆಯಂತಹ ಕ್ರಾಂತಿಕಾರಕ ಕಾನೂನು ಜಾರಿಯಾಗುವ ಸಂದರ್ಭದಲ್ಲೂ ದಲಿತರಿಗೆ ನ್ಯಾಯ ದೊರಕಲಿಲ್ಲ. ಕೃಷಿ ಕಾರ್ಮಿಕರಾಗಿದ್ದ ದಲಿತರಿಗೆ ಎಲ್ಲಿ ಭೂಮಿಯ ಒಡೆತನ ನೀಡಬೇಕಾಗುತ್ತದೆಯೋ ಎಂಬ ಕಾರಣಕ್ಕೆ ಅವರನ್ನು ಹೊಡೆದು ಓಡಿಸಿದ ಸಂದರ್ಭಗಳನ್ನು ಅವರು ನೆನೆಪಿಸಿಕೊಂಡರು.

ಬಗರ್‌ಹುಕುಂ ಕಾಯ್ದೆಯಿಂದ ದಲಿತರಿಗೆ ಭೂಮಿಯ ಹಕ್ಕಿನ ವಿಷಯದಲ್ಲಿ ದೊಡ್ಡ ಅನ್ಯಾಯವಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರಿದವರಿಗೆ ಮಾತ್ರ ಈ ಕಾಯ್ದೆಯ ಲಾಭ ದೊರಕಿದೆ. ಚಳವಳಿ ಮತ್ತು ಸಂಘರ್ಷ ಒಂದೇ ದಲಿತರಿಗೆ ಭೂಮಿ ದೊರಕಿಸಲು ಇರುವ ಮಾರ್ಗವಾಗಿದೆ ಎಂದು ಹೇಳಿದರು. ಚಿಂತಕ ಶಿವಸುಂದರ್ ಮಾತನಾಡಿ,  ಭಾರತದಲ್ಲಿ ಇಂದಿಗೂ ಅತ್ಯಂತ ಆಸ್ತಿಹೀನರೆಂದರೆ ದಲಿತರು. ಆಸ್ತಿ ಇಲ್ಲದವರು ಈ ದೇಶದ ನಾಗರಿಕರೆ ಅಲ್ಲ ಎಂಬ ವಾತಾವರಣ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಿ ಭೂಮಿಯ ಹಕ್ಕಿನ ಪ್ರಶ್ನೆ ದಲಿತ ಚಳವಳಿಗೆ ಮುಖ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಘಟಿತರಾಗಿ, ಸುಧೀರ್ಘವಾಗಿ ಬದ್ಧತೆಯಿಂದ ನೈತಿಕ ಶಕ್ತಿಯೊಂದಿಗೆ ಹೋರಾಟ ಮಾಡದೆ ಇರುವ ಕಾರಣಕ್ಕೆ ನಮ್ಮ ಸರ್ಕಾರ ಚಳವಳಿಗಳನ್ನು ಉಡಾಫೆಯಿಂದ ನೋಡುತ್ತಿದೆ. ಈ ಬಗ್ಗೆ ಚಳವಳಿಕಾರರು ಆತ್ಮವಿಮರ್ಶೆ ನಡೆಸಬೇಕಿದೆ ಎಂದರು.

ಡಿಎಸ್‌ಎಸ್ ಮುಖಂಡ ಎಸ್. ಲಿಂಗರಾಜು ಮಾತನಾಡಿ, ದಲಿತರು ಈ ದೇಶದ ಮೂಲ ನಿವಾಸಿಗಳು. ಭೂಮಿಯ ಹಕ್ಕು ಮಾತ್ರ ಅವರಿಗೆ ಸ್ವಾವಲಂಬನೆಯ ಬದುಕು ಕೊಡಬಲ್ಲದು. ಈ ನಿಟ್ಟಿನಲ್ಲಿ ಹೋರಾಟವನ್ನು ಚುರುಕುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಡಿಎಸ್‌ಎಸ್‌ನ ಎಸ್.ಎಸ್. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಭೂರಹಿತರ ಹೋರಾಟ ವೇದಿಕೆಯ ಕಬಸೆ ಅಶೋಕಮೂರ್ತಿ, ಮಂಜುನಾಥ, ನಾರಾಯಣ ಗೋಳಗೋಡು ಇನ್ನಿತರರು ಹಾಜರಿದ್ದರು. ವೀರಭದ್ರ ಕ್ರಾಂತಿಗೀತೆ ಹಾಡಿದರು.

ಅಣ್ಣಪ್ಪ ಬಾಳೆಗುಂಡಿ ಸ್ವಾಗತಿಸಿದರು.  ಬಸವರಾಜ ಪತ್ರಹೊಂಡ ವಂದಿಸಿದರು. ಪರಮೇಶ್ವರ ಕೆ. ಆಲಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.