ADVERTISEMENT

ಮತದಾರರ ಜಾಗೃತಿಗಾಗಿ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 11:01 IST
Last Updated 18 ಏಪ್ರಿಲ್ 2018, 11:01 IST

ಶಿವಮೊಗ್ಗ: ಜಿಲ್ಲೆಯ ಅರ್ಹ ಮತದಾರರೆಲ್ಲರೂ ನಿರ್ಲಕ್ಷ್ಯ ಮಾಡದೇ  ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಕರೆ ನೀಡಿದರು.

ಮಹಾವೀರ ವೃತ್ತದಲ್ಲಿ ಜಿಲ್ಲಾ ಪಂಚಾಯ್ತಿ, ಪಾಲಿಕೆಯ ಸಹಯೋಗದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ವಿವಿಧ ಇಲಾಖೆಗಳ ನೌಕರರು ಮತ ಜಾಗೃತಿಗಾಗಿ ನಿರ್ಮಿಸಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಭ್ಯರ್ಥಿಗಳು ತೋರುವ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಸಾಮಾಜಿಕವಾಗಿರುವ ನಮ್ಮೆಲ್ಲ ಸಮಸ್ಯೆಗಳಿಗೆ ಸಮರ್ಥ ಜನನಾಯಕನ ಆಯ್ಕೆ, ಉತ್ತಮ ಸರ್ಕಾರ ರಚನೆಯೇ ಪರಿಹಾರ. ಅದಕ್ಕಾಗಿ ಚುನಾವಣೆ ನಮಗೆ ಒದಗಿ ಬಂದಿರುವ ಸುವರ್ಣಾವಕಾಶ. ಈ ಸದವಕಾಶವನ್ನು ಬಳಸಿಕೊಂಡು ಎಲ್ಲರೂ ಮತದಾನಕ್ಕೆ ಮುಂದಾಗಬೇಕು ಎಂದರು.

ADVERTISEMENT

ಮತಗಟ್ಟೆಯಿಂದ ದೂರ ಉಳಿದು, ಮತದಾನದ ದಿನವನ್ನು ಕೇವಲ ರಜಾ ದಿನವಾಗಿ ಕಳೆಯದೇ ಹಬ್ಬದ ಸಂಭ್ರಮದಂತೆ ಆಚರಿಸುವಂತಾಗಬೇಕು. ಚುನಾವಣೆ ಪ್ರಜಾತಂತ್ರದ ಹಬ್ಬ ಎಂದರು.

ಈ ಸಂದರ್ಭದಲ್ಲಿ ಮತದಾನದ ಮಹತ್ವ ಸಾರುವ ಹಲವಾರು ವ್ಯಂಗ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಬೊಂಬೆಯ ಮುಖವಾಡ ಧರಿಸಿದ್ದ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್‌ ಕುಮಾರ್, ಪಾಲಿಕೆ ಆಯುಕ್ತ ಮುಲ್ಲೈಮುಹಿಲನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚಾದೊ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.