ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯಾ ವಾರ್ಡ್ ಗಳ ಸರ್ಕಾರಿ ಶಾಲೆಗಳಲ್ಲಿ ಮತದಾರರ ಪಟ್ಟಿ ಪರಿಶೀಲನೆ ಕಾರ್ಯವನ್ನು ಜಿಲ್ಲಾಡಳಿತ ಭಾನುವಾರ ಹಮ್ಮಿಕೊಂಡಿತ್ತು.
ಬಿಎಲ್ಒ ಅಧಿಕಾರಿಗಳ ನೇತೃತ್ವದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ನೋಂದಣಿ ಕಾರ್ಯದಲ್ಲಿ ತಮ್ಮ ಹೆಸರುಗಳ ಪರಿಶೀಲನೆ
ನಡೆಸಿದರು.
ಕೆಲವು ಕೇಂದ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ದೂರು ಒಂದೆಡೆಯಾದರೆ, ಹೆಸರು ತಪ್ಪಾಗಿದೆ ಎಂಬ ದೂರು ಇನ್ನೊಂದಡೆ ಕೇಳಿಬರುತ್ತಿತ್ತು. ಕೆಲವು ವಾರ್ಡ್ ಗಳ ಸರ್ಕಾರಿ ಶಾಲೆಗಳಲ್ಲಿಯ ಬಿಎಲ್ ಒ ಅಧಿಕಾರಿಗಳ ಜತೆ ವಾಗ್ವಾದ ನಡೆಯಿತು.
‘ಸುಮಾರು ಏಳು–ಎಂಟು ವರ್ಷಗಳಿಂದ ಗಾಡಿಕೊಪ್ಪದಲ್ಲಿ ವಾಸಿಸುತ್ತಿದ್ದು, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಗಳಾಗಿಲ್ಲ’ ಎಂದು ನಿವಾಸಿ ಪರಶುರಾಮ ದೂರಿದರು.
ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದೇ ಜೀವನ ನಡೆಸುತ್ತಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನವೀಕರಣ ಪಟ್ಟಿಯಲ್ಲಿ ಕೂಡ ನಮ್ಮ ಹೆಸರಿಲ್ಲದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪರಶುರಾಮ ಮತ್ತು ಕುಟುಂಬ ಗಾಡಿಕೊಪ್ಪದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಜೀವನೋಪಾಯಕ್ಕಾಗಿ ಕೆಲವು ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಮತಪಟ್ಟಿಯಲ್ಲಿ ಹೆಸರು ಸೇರಿಸುವಲ್ಲಿ ತೊಡಕುಗಳಾಗುತ್ತಿದೆ’ ಎಂದು ಸಂಬಂಧಪಟ್ಟ ಬಿಎಲ್ ಒ ಅಧಿಕಾರಿ ಪ್ರತಿಕ್ರಿಯಿಸಿದರು.
‘ನನ್ನ ಹೆಸರು ಸರಿಯಾಗಿ ಮುದ್ರಿತ ವಾಗಿಲ್ಲ ಹಾಗೂ ಲೋಪ ಇದೆ. ಈ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಆದರೂ ಮತ್ತೊಮ್ಮೆ ತಪ್ಪಾಗಿ ಮುದ್ರಣವಾಗಿ ಬಂದಿದೆ’ ಎಂದು ಸುಷ್ಮಾ ದೂರಿದರು.
ಶಿವಮೊಗ್ಗ ತಾಲ್ಲೂಕಿನ ಹಾರ್ನಳ್ಳಿ ಹೋಬಳಿಯಲ್ಲಿ ಭಾನು ವಾರ ನಾಡಾ ಕಚೇರಿ ಸಿಬ್ಬಂದಿ ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು. ಹೋಬಳಿಯ ಸುಮಾರು 37ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯಿತು. ನಗರದಲ್ಲಿ ನಡೆಯುತ್ತಿರುವ ಮತದಾರರ ನೋಂದಣಿ ಕಾರ್ಯ ಚುರುಕಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.