ADVERTISEMENT

ಮನುಷ್ಯ, ಹಾವಿನ ಸಂಘರ್ಷ ನಿವಾರಣೆಗೆ ಕ್ರಮ

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 5:42 IST
Last Updated 19 ಮಾರ್ಚ್ 2014, 5:42 IST
ಕಾಳಿಂಗ ಸರ್ಪ
ಕಾಳಿಂಗ ಸರ್ಪ   

ತೀರ್ಥಹಳ್ಳಿ: ಮನುಷ್ಯ ಹಾಗೂ ಹಾವುಗಳ ನಡುವಿನ ಸಂಘರ್ಷ ನಿವಾರಣೆ ಮತ್ತು  ಪರಿಸರದಲ್ಲಿ ಹಾವುಗಳ ಪ್ರಾಮುಖ್ಯತೆಯನ್ನು  ಜನರಿಗೆ ಮನವರಿಕೆ ಮಾಡಿ, ಹಾವುಗಳ ಕುರಿತು ಸಂಶೋಧನೆ ನಡೆಸಲು ಆಗುಂಬೆ ಮಳೆ ಕಾಡು ಸಂಶೋಧನಾ ಕೇಂದ್ರ ವಿಶೇಷವಾದ ಮಾಹಿತಿ ಸಂಗ್ರಹಿಸಿದೆ.

2005ರಲ್ಲಿ ಆಗುಂಬೆಯಲ್ಲಿ ಆರಂಭಗೊಂಡ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ(ಎಆರ್‌ಆರ್‌ಎಸ್‌)ಇದುವರೆಗೆ ಕೆಲವು ಮಹತ್ವದ ವಿಚಾರಗಳನ್ನು ದೃಢಪಡಿಸಿದ್ದು, ಜನರು ಹಾವಿನ ನಡುವೆ ಇರಬೇಕಾದ ಸಂಬಂಧಗಳನ್ನು ಜನ ಜಾಗೃತಿ ಮೂಲಕ ತಿಳಿಸುವ ಪ್ರಯತ್ನ ನಡೆಸಿದೆ. ಶಾಲೆಗಳಿಗೆ ಸಂಶೋಧನಾ ಕೇಂದ್ರದ ತಂಡ ತೆರಳಿ ವಿದ್ಯಾರ್ಥಿಗಳಲ್ಲಿ ಹಾವಿನ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯತ್ನಿಸಿದೆ.

ಜಗತ್ತಿನಲ್ಲಿ ಅತಿ ಉದ್ದವಾಗಿ ಬೆಳೆಯುವ ವಿಷಯುಕ್ತ ಹಾವು ಕಾಳಿಂಗ ಸರ್ಪ. ಪಶ್ಚಿಮ ಘಟ್ಟ, ಈಶಾನ್ಯ ಭಾರತ, ಅಂಡಮಾನ್‌ ದ್ವೀಪ ಇವುಗಳ ಆವಾಸ ಸ್ಥಾನವಾಗಿದೆ. ಕಾಡಿನ ನಾಶದಿಂದ ಕಾಳಿಂಗ ಸಪರ್ಗಳ ಸಂತತಿ ಕ್ಷೀಣಿಸುತ್ತಿದೆ. ಇವುಗಳನ್ನು ಅಪಾಯದ ಅಂಚಿನಲ್ಲಿರುವ ಜೀವಿ ಎಂದು 2012ರಲ್ಲಿ ಘೋಷಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಷೆಡ್ಯೂಲ್‌ 2ರ ಅಡಿಯಲ್ಲಿ ಕಾಳಿಂಗ ಸರ್ಪ ಸಂರಕ್ಷಿತ ಜೀವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಕಾಳಿಂಗ ಹಾವಿನ ಸಂಘರ್ಷ ಹೆಚ್ಚಾಗಿದ್ದು ಹಾವುಗಳನ್ನು ಕೊಲ್ಲಲಾಗುತ್ತದೆ. ಇಲ್ಲವೇ ಸ್ಥಳಾಂತರಿಸಲಾಗುತ್ತಿದೆ.

ಸಂಶೋಧನೆ ಮತ್ತು ಅಧ್ಯಯನಗಳಿಂದ ಈ ಹಾವಿನ ಬಗೆಗೆ ಅಮೂಲ್ಯ ಒಳನೋಟ ಗಳು ಮತ್ತು ಮಾಹಿತಿಗಳು ಲಭ್ಯವಾಗಿವೆ. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ವನ್ಯವಾಸಿ ಕಾಳಿಂಗ ಸರ್ಪದ ಪರಿಸರದ ಬಗ್ಗೆ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ನಡೆಸಲಾಯಿತು. ಇದರಿಂದ ಕಾಳಿಂಗ ಸರ್ಪಗಳು ತನ್ನದೇ ಆದ ಒಂದು ಸರಹದ್ದಿನೊಳಗೆ ಜೀವಿಸುತ್ತವೆ ಎಂಬುದು ತಿಳಿದು ಬಂದಿದೆ. 8 ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಜೀವನದ ಬಹುಭಾಗ ಕಳೆಯುತ್ತವೆ. ಸಂತಾನಾಭಿವೃದ್ಧಿಯ ಮಾರ್ಚ್‌ ನಿಂದ ಮೇ ವರೆಗೆ  ಮಾತ್ರ ಸಂಗಾತಿಗಳ ಹುಡುಕಾಟದಲ್ಲಿ ಹೆಚ್ಚಿನ ಸಂಚಾರ ನಡೆಸುತ್ತವೆ.

ಮರ ಏರುವುದು, ಈಜುವುದು ಕರಗತವಾಗಿದೆ. ಆಹಾರ ಸರಪಳಿಯಲ್ಲಿ ಹಾವುಗಳನ್ನೇ ತಿಂದು ಜೀವಿಸುತ್ತವೆ. ಕಾಳಿಂಗ ಹಾಗೂ ಇತರೆ ಹಾವುಗಳು ಸಮತೋಲನ ಕಾಪಾಡುವ ಮೂಲಕ ಪರಿಸರವನ್ನು ಸಮತೋಲನದಲ್ಲಿ ಇಡುತ್ತವೆ. ಆಹಾರ ಸರಪಳಿಯ ಮೇಲುವರ್ಗದ ಕಾಳಿಂಗ ಹಾವುಗಳು ಇಲ್ಲದೇ ಇದ್ದರೆ ಹಾವುಗಳ ಸಂಖ್ಯೆ ಹೆಚ್ಚುತ್ತದೆ  ಎಂಬುದನ್ನು ಸಂಶೋಧನಾ ಕೇಂದ್ರ ಹೇಳಿದೆ.

ಕಾಳಿಂಗ ಸರ್ಪ ಕಡಿಯುವುದು ಬಹಳ ವಿರಳ. ಬಲು ಸಂಕೋಚ ಮತ್ತು ಚಾಣಾಕ್ಷ ಸ್ವಭಾವದ ಕಾಳಿಂಗ ಸರ್ಪಗಳು ಮನುಷ್ಯನ ಸಂಪರ್ಕವನ್ನು ಇಷ್ಟಪಡುವುದಿಲ್ಲ. ಮನುಷ್ಯ ವಾಸಿಸುವ ಸ್ಥಳಗಳಿಗೆ ಇವುಗಳು ಬರಲು ಮುಖ್ಯ ಕಾರಣ ನಾಯಿ, ಬೆಕ್ಕು, ಹಸುಗಳಿಂದ ರಕ್ಷಣೆ ಪಡೆಯುವುದಕ್ಕೆ. ಇತರೆ ಹಾವುಗಳನ್ನು ಬೇಟೆಯಾಡುವುದಕ್ಕೆ.  ಕಾಳಿಂಗ ಹಾವುಗಳು ಸಣ್ಣ ಕಾಡುಗಳ ಮೂಲಕ ಚಲಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಜನ ವಸತಿಗಳ ಬಳಿ ಬರುತ್ತವೆ. ಆಗ ಜನರು ಹಾವನ್ನು ಹಿಡಿದು, ಹೆದರಿಸಿ ಓಡಿಸುತ್ತಾರೆ. ಇದು ಹಾವಿನ ನೈಸರ್ಗಿಕ ನಡುವಳಿಕೆಗೆ ತುಂಬಾ ತೊಂದರೆ ಮಾಡುತ್ತದೆ ಎಂದು ಸಂಶೋಧಕ ಅಜಯ್‌ ಗಿರಿ ಹೇಳುತ್ತಾರೆ.

ಕಾಳಿಂಗ ಸರ್ಪದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ ಹಾವು ಕಂಡಾಗ ದಿಗಿಲುಗೊಳ್ಳಬೇಡಿ, ಕೊಲ್ಲಲು ಅಥವಾ ಹಿಡಿಯಲು ಯತ್ನಿಸಬೇಡಿ, ಹಾವಿಗಿಂತ ದೂರದಲ್ಲಿರಿ, ಮನೆಯೊಳಗೆ, ಮನೆಯ ಅಸುಪಾಸಿನಲ್ಲಿ ಹಾವು ಕಂಡಾಗ ಏನು ಮಾಡಬೇಕು, ಯಾವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಕೊಟ್ಟಿಗೆಯೊಳಗೆ ಹಾವು ಕಂಡಾಗ ಏನು ಮಾಡಬೇಕು, ತೋಟದಲ್ಲಿ ಹಾವನ್ನು ಹೇಗೆ ನಿಭಾಯಿಸಬೇಕು. ಹಾವು ಕಡಿದರೆ ಏನು ಮಾಡಬೇಕು ಎಂಬ ಹಲವಾರು ಉಪಯುಕ್ತ ಮಾಹಿತಿಯನ್ನು ಉರಗ ತಜ್ಞರಾದ ಅಜಯ್‌ ಗಿರಿ, ಧೀರಜ್‌ ಭೈಸಾರೆ ಹಾಗೂ ರಾಮ್‌ ಪ್ರಸಾದ್‌ ರಾವ್‌ ಜನರಿಗೆ ತಿಳಿಸುವ ಪ್ರಯತ್ನ ನಡೆಸಿದ್ದಾರೆ.                    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.