ADVERTISEMENT

ಮರಳು, ನಾಟಾ ಅಕ್ರಮ ಸಾಗಣೆ

ಪರವಾನಗಿ ಉಲ್ಲಂಘನೆ; ಕ್ರಮಕ್ಕೆ ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:35 IST
Last Updated 26 ಏಪ್ರಿಲ್ 2013, 9:35 IST
ಹೊಸನಗರ ತಾಲ್ಲೂಕಿನಲ್ಲಿ ಶರಾವತಿ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದ ದೃಶ್ಯ.
ಹೊಸನಗರ ತಾಲ್ಲೂಕಿನಲ್ಲಿ ಶರಾವತಿ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದ ದೃಶ್ಯ.   

ಹೊಸನಗರ: ಬಹುತೇಕ ಅಧಿಕಾರಿ, ಸಿಬ್ಬಂದಿ ಚುನಾವಣಾ ಸೇವೆಯಲ್ಲಿರುವ ಸಂರ್ಭದಲ್ಲಿ ಅಕ್ರಮ ಮರಳು, ಕಲ್ಲು, ಕಳ್ಳನಾಟಾ ದಂಧೆಕೋರರಿಗೆ ಸುಗ್ಗಿಯ ಕಾಲ ಎಂಬ ದೂರು ಕೇಳಿಬರುತ್ತಿದೆ.

ತಾಲ್ಲೂಕಿನ ಶರಾವತಿ ಮತ್ತು ಅದರ ಉಪ ನದಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಬೆಳಿಗ್ಗೆ 5ರಿಂದ ಆರಂಭವಾಗುತ್ತಿದೆ. ಕೆಲವು ಲಾರಿಗಳು ರಾತ್ರಿಯೇ ನದಿ ಬುಡದಲ್ಲಿ ಜಮಾಯಿಸಿ 7 ಗಂಟೆಯೊಳಗೆ ಮರಳು ಸಾಗಾಟಕ್ಕೆ ತೊಡಗಿದೆ ಎನ್ನುವುದು ಹೊಳೆ ದಡದ ಬದಿಯಲ್ಲಿರುವ ಗ್ರಾಮಸ್ಥರ ಆರೋಪ.

ಲೋಕೋಪಯೋಗ ಇಲಾಖೆ ಮರಳು ಸಾಗಾಟದ ಪರವಾನಗಿ ನೀಡುವ ಸಮಯ ಬೆಳಿಗ್ಗೆ 8. ಒಂದು ಪರವಾನಗಿಯಲ್ಲಿ 2-3 ಟ್ರಿಪ್ ಹೊಡೆಯುತ್ತಿದ್ದರು. ಈಗ ಪರವಾನಗಿ ಇಲ್ಲದೇ ಲಾರಿಗಳು ಓಡಾಡುತ್ತಿವೆ. ಪರವಾನಗಿ ತಪಾಸಣೆ ಮಾಡುವ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಚುನಾವಣೆಯ ಹಿಂದೆ ಬಿದ್ದಿರುವುದು ಅಕ್ರಮ ಸಾಗಾಟಕ್ಕೆ ಹಬ್ಬವಾಗಿದೆ ಎಂಬ ಮಾತು ಕೇಳಿಬಂದಿದೆ.

ಮರಳು, ಕಲ್ಲು ಪರವಾನಗಿ ಪತ್ರ ಸರಿಯಾಗಿ ತಪಾಸಣೆ ಮಾಡದ ಕಾರಣ ಲೋಕೋಪಯೋಗಿ ಇಲಾಖೆಯಲ್ಲಿ ಪರವಾನಗಿ ಪತ್ರ ಪಡೆಯುವ ಸಂಖ್ಯೆ ಇಳಿಮುಖ ಸಹ ಆಗಿದೆ. ಹಾಗೆಂದು, ಮರಳು ಲೋಡ್ ಲಾರಿಗಳ ಸಾಗಾಟದ ಸಂಖ್ಯೆ  ಕಡಿಮೆ ಆಗಿಲ್ಲ ಎನ್ನಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು, ಕಲ್ಲು, ಕಳ್ಳನಾಟಾ ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.