ADVERTISEMENT

ಮುಖಂಡರ ಗುದ್ದಾಟ; ವರಿಷ್ಠರಿಗೆ ಪೀಕಲಾಟ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:15 IST
Last Updated 5 ಅಕ್ಟೋಬರ್ 2012, 5:15 IST

ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ಶಿವಮೊಗ್ಗ: ಬಿಜೆಪಿ ಆಡಳಿತದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಅ. 8ರಂದು ಘೋಷಣೆಯಾಗಿದೆ. ಈ ಮಧ್ಯೆ ಆರಂಭವಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಡುವಿನ `ಗುದ್ದಾಟ~ದಿಂದ ಜಿಲ್ಲಾ ವರಿಷ್ಠರಿಗೆ ಈಗ ಆಯ್ಕೆ ಗೊಂದಲ ಸೃಷ್ಟಿಯಾಗಿದೆ.

ರಾಜ್ಯ ಸರ್ಕಾರ ಜಿಲ್ಲಾ ಪಂಚಾಯ್ತಿ ಎರಡನೇ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟಿಸಿದ್ದು, ಅಧ್ಯಕ್ಷ- ಉಪಾಧ್ಯಕ್ಷ ಎರಡೂ ಸ್ಥಾನವನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅಧ್ಯಕ್ಷ ಸ್ಥಾನವನ್ನು ಬಿಸಿಎಂ `ಬಿ~ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದೆ.

ಜಿಲ್ಲಾ ಪಂಚಾಯ್ತಿಯಲ್ಲಿ ಒಟ್ಟು 31 ಸ್ಥಾನಗಳಿದ್ದು, ಬಿಜೆಪಿ 16, ಕಾಂಗ್ರೆಸ್ 13 ಹಾಗೂ ಜೆಡಿಎಸ್ 2 ಅಭ್ಯರ್ಥಿಗಳಿದ್ದಾರೆ. ಸರಳ ಬಹುಮತ ಹೊಂದಿರುವ ಬಿಜೆಪಿ ಅಧಿಕಾರ ನಡೆಸುತ್ತಿದೆ.

ಮೊದಲ ಹಂತದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹೊಸನಗರ ತಾಲ್ಲೂಕು ನಗರ ಕ್ಷೇತ್ರದ ಶುಭಾ ಕೃಷ್ಣಮೂರ್ತಿ ಹಾಗೂ ಬಿಸಿಎಂ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನದಲ್ಲಿ ಸೊರಬ ತಾಲ್ಲೂಕು ಉಳವಿ ಕ್ಷೇತ್ರದ ಹುಣವಳ್ಳಿ ಗಂಗಾಧರಪ್ಪ ಅಧಿಕಾರ ನಡೆಸಿದ್ದರು. ಈ ಮೊದಲು 10 ತಿಂಗಳವರೆಗೆ ಮಾತ್ರ ಅಧಿಕಾರ ನಡೆಸುವಂತೆ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಇವರಿಬ್ಬರಿಗೆ ಮತ್ತೆ 10 ತಿಂಗಳು ಅಧಿಕಾರ ಗದ್ದಿಗೆಯಲ್ಲಿ ಮುಂದುವರಿಯುವ ಅವಕಾಶ ಅನಾಯಾಸವಾಗಿ ಒದಗಿಬಂದಿತ್ತು.


ಈಗ ಇದೇ 8ರಂದು ಈ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಯಡಿಯೂರಪ್ಪ- ಈಶ್ವರಪ್ಪ ನಡುವಿನ ವೈಮನಸ್ಸಿನಿಂದ ಇಬ್ಬರಿಗೂ ಸರಿ ಎನಿಸುವ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಸವಾಲು ಜಿಲ್ಲಾ ಬಿಜೆಪಿಗೆ ಎದುರಾಗಿದೆ. ಅಧ್ಯಕ್ಷ- ಉಪಾಧ್ಯಕ್ಷರಾಗಲು ಸದಸ್ಯರಲ್ಲೇ ಪೈಪೋಟಿ ಆರಂಭವಾಗಿದ್ದು, ಯಡಿಯೂರಪ್ಪ-ಈಶ್ವರಪ್ಪ ಅವರನ್ನು ಬೇರೆ-ಬೇರೆಯಾಗಿ ಭೇಟಿ ಮಾಡುತ್ತಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೀಸಲಿರುವ ಬಿಸಿಎಂ (ಬಿ) ಮಹಿಳಾ ವರ್ಗದಲ್ಲಿ ಸೊರಬ ತಾಲ್ಲೂಕಿನ ಆನವಟ್ಟಿ ಕ್ಷೇತ್ರದ ಗೀತಾ ಮಲ್ಲಿಕಾರ್ಜುನ್, ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಕ್ಷೇತ್ರದ ಗಾಯತ್ರಿ ಷಣ್ಮುಖಪ್ಪ ಹಾಗೂ ಶಿಕಾರಿಪುರದ ಹೊಸೂರು ಕ್ಷೇತ್ರದ ಶಾಂತಮ್ಮ ಪ್ರೇಮ್‌ಕುಮಾರ್ ಇದ್ದಾರೆ. ಇವರಲ್ಲಿ ಯಡಿಯೂರಪ್ಪ- ಈಶ್ವರಪ್ಪ ಇಬ್ಬರೂ ಒಪ್ಪುವ ಅಭ್ಯರ್ಥಿ ಯಾರು? ಇವರಲ್ಲಿ ಯಾರನ್ನು ಆಯ್ಕೆ ಮಾಡಿದರೆ  ಮುಂಬರುವ  ವಿಧಾನಸಭಾ  ಚುನಾವಣೆಯಲ್ಲಿ  ಪಕ್ಷಕ್ಕೆ ಅನುಕೂಲ  ಆಗುತ್ತದೆ. ಈ ಎಲ್ಲಾ  ಲೆಕ್ಕಾಚಾರಗಳನ್ನು  ಬಿಜೆಪಿ ಹಾಕುತ್ತಿದೆ.

ಗೀತಾ ಮಲ್ಲಿ ಕಾರ್ಜುನ್ ಎರಡನೇ ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವವರು. ಹಾಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು; ಅನುಭವ ಇದೆ. ಸಮರ್ಥವಾಗಿ ಅಧ್ಯಕ್ಷಗಿರಿಯನ್ನು ನಡೆಸಿಕೊಂಡು ಹೋಗುತ್ತಾರೆಂಬ ಲೆಕ್ಕಾಚಾರ ಪಕ್ಷದ್ದು. ಆದರೆ, ಈ ಹಿಂದಿನ ಅವಧಿಯಲ್ಲಿ ಸೊರಬದವರೇ ಉಪಾಧ್ಯಕ್ಷರಾಗಿದ್ದರು. ಅಲ್ಲದೇ, ಗೀತಾ ಮಲ್ಲಿಕಾರ್ಜುನ್ ಅವರೂ ಕೂಡ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಈಗ ಮತ್ತೆ ಅವರಿಗೆ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳೂ ಎದ್ದಿವೆ. 

 ಗಾಯತ್ರಿ ಷಣ್ಮುಖಪ್ಪ ಮೊದಲ ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾದರೂ, ಇವರ ಪತಿ ಷಣ್ಮುಖಪ್ಪ ಬಿಜೆಪಿ ಶಿವಮೊಗ್ಗ ಗ್ರಾಮಾಂತರ ವಿಭಾಗದ ಅಧ್ಯಕ್ಷರು. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಾಯತ್ರಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಬಲ ಬರುತ್ತದೆಂಬ ಲೆಕ್ಕಾಚಾರವೂ ವರಿಷ್ಠರಲ್ಲಿದೆ. ಶಾಂತಮ್ಮ ಪ್ರೇಮ್‌ಕುಮಾರ್ ಹೊಸ ಮುಖ. ಆದರೆ, ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ ಕ್ಷೇತ್ರದವರು. ಯಡಿಯೂರಪ್ಪ ಪಟ್ಟು ಹಿಡಿದರೆ ಶಾಂತಮ್ಮ ಪ್ರೇಮ್‌ಕುಮಾರ್ ಅವರ ಅದೃಷ್ಟ ಖುಲಾಯಿಸಬಹುದು.

ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಶುಭಾ ಕೃಷ್ಣಮೂರ್ತಿ ಅವರನ್ನು ಬಿಟ್ಟು ಉಳಿದವರೆಲ್ಲರೂ ಈ ಸ್ಥಾನಕ್ಕೆ ಪೈಪೋಟಿ ನಡೆಸಲು ಅವಕಾಶವಿದೆ. ಬಿಜೆಪಿಯಲ್ಲಿ 9 ಜನ ಮಹಿಳೆಯರಿದ್ದು, ಮೂವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದರೆ, ಒಬ್ಬರು ಈಗಾಗಲೇ ಅಧಿಕಾರ ಅನುಭವಿಸಿದ್ದಾರೆ. ಉಳಿದ ಐದು ಜನರಲ್ಲಿ ತೀವ್ರ ಸ್ಪರ್ಧೆ ಇದ್ದು, ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕಾದುನೋಡಬೇಕಿದೆ.

ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ನೀಡುವುದು ಖಚಿತವಾದಾಗ, ಉಪಾಧ್ಯಕ್ಷ ಸ್ಥಾನ ಈಡಿಗರಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಮುಂದಿನ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.