ADVERTISEMENT

‘ಮುಟ್ಟು ಆಚರಣೆ ಹೆಣ್ಣುಮಕ್ಕಳಿಗೆ ಮಾರಕ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 9:43 IST
Last Updated 13 ಅಕ್ಟೋಬರ್ 2017, 9:43 IST

ಆನಂದಪುರ: ‘ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬ ಹಾಗೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮುಟ್ಟಿನ ನೆಪವೊಡ್ಡಿ ಹೆಣ್ಣುಮಕ್ಕಳನ್ನು ಗ್ರಾಮದಿಂದ ಹೊರಗೆ ಕಳುಹಿಸುವ ಪದ್ಧತಿ ಆಚರಣೆಯಿಂದ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ’ ಎಂದು ಚಿಂತಕ ರಾಜಪ್ಪ ಮಾಸ್ಟರ್ ಕಳವಳ ವ್ಯಕ್ತಪಡಿಸಿದರು.

ಆನಂದಪುರದ ಸಂತೆ ಮೈದಾನದಲ್ಲಿ ಶಿವಮೊಗ್ಗದ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಬುಧವಾರ ಆಯೋಜಿಸಿದ್ದ ಮೌಢ್ಯ ಆಚರಣೆಯ ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಟ್ಟಾಗುವುದು ಒಂದು ಸಹಜ ಪ್ರಕ್ರಿಯೆ. ಒಂದು ಜೀವಕ್ಕೆ ಜನ್ಮ ಕೊಡುವ ಪ್ರಕ್ರಿಯೆ. ಅದನ್ನು ಅಶುದ್ಧ ಎಂದು ಯಾವ ದೇವರು, ಧರ್ಮದಲ್ಲೂ ಹೇಳಿಲ್ಲ. ಈ ಪದ್ಧತಿ ನಾವೇ ಮಾಡಿಕೊಂಡಿದ್ದು. ದಲಿತರಲ್ಲಿ ಹೆಚ್ಚಾಗಿ ಈ ಆಚರಣೆ ಕಂಡುಬಂದಿದ್ದು, ಇದು ಅನಾಗರಿಕ ಆಚರಣೆಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ಮೊದಲು ಸತಿ ಪದ್ಧತಿ, ದೇವದಾಸಿ ಪದ್ಧತಿ ಆಚರಣೆಯಲ್ಲಿತ್ತು. ಹಲವು ವರ್ಷಗಳ ಕಾಲ ಜನರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಕಾಲಾಂತರದಲ್ಲಿ ಈ ಪ್ರದ್ಧತಿಯನ್ನು ನಿಷೇಧಿಸಲಾಯಿತು’ ಎಂದು ಹೇಳಿದರು.

‘ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ನಿಷೇಧದ ಸಂದರ್ಭದಲ್ಲಿ ಜನರ ಪ್ರತಿರೋಧ ಬಂದರೂ ಸರ್ಕಾರ ಆಯೋಗ ರಚಿಸಿ ಆ ಪದ್ಧತಿಯನ್ನು ನಿಷೇಧಿಸಿತು. ಇದರಿಂದ ಹಲವು ಹೆಣ್ಣುಮಕ್ಕಳ ಮಾನ ಹೋಗುವುದು ತಪ್ಪಿದಂತಾಯಿತು’ ಎಂದು ತಿಳಿಸಿದರು.

‘ಹೆಣ್ಣನ್ನು 2ನೇ ದರ್ಜೆಯ ಪ್ರಜೆಯಾಗಿ, ತಾತ್ಸಾರ ಧೋರಣೆಯಿಂದ ಕಾಣುವುದು ಖಂಡನೀಯ. ಹೆಣ್ಣುಮಕ್ಕಳಿಗೆ ಎಲ್ಲರೂ ನೈತಿಕ ಬೆಂಬಲ ನೀಡುವ ಮೂಲಕ ಬದಲಾವಣೆ ತರಬೇಕು’ ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕಿ ವಾಣಿ, ಕಲಾವಿದೆ ಪ್ರತಿಭಾ ರಾಘವೇಂದ್ರ, ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ, ಸಾಗರ ಇಂದಿರಾ ಕಾಲೇಜಿನ ಉಪನ್ಯಾಸಕಿ ವೃಂದಾ ಹೆಗಡೆ, ಪ್ರಮುಖರಾದ ಹೊಸಕೊಪ್ಪ ಪರಮೇಶ್ವರಪ್ಪ, ವಸಂತ ಕುಗ್ವೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.