ADVERTISEMENT

ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:30 IST
Last Updated 20 ಮಾರ್ಚ್ 2012, 5:30 IST

ಸಾಗರ: ಪ್ರೇಕ್ಷಕರನ್ನು ರಂಜಿಸಲು ತಮ್ಮಲ್ಲಿರುವ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಧಾರೆ ಎರೆಯುವ ಯಕ್ಷಗಾನ ಕಲಾವಿದರ ಬದುಕು ವೃದ್ಧಾಪ್ಯದಲ್ಲಿ ಅತ್ಯಂತ ಸಂಕಷ್ಟದಿಂದ ಕೂಡಿರುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಪ್ರಜ್ಞಾಮಿತ್ರ ಮಂಡಳಿ ಏರ್ಪಡಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಈಚೆಗೆ ಸನ್ಮಾನಿಸಿ ಅವರು ಮಾತನಾಡಿದರು.

ಸರ್ಕಾರ ಯಕ್ಷಗಾನ ಕಲಾವಿದರು ಜೀವನ ಸಂಧ್ಯದಲ್ಲಿರುವ ಸಂದರ್ಭದಲ್ಲಿ ಅವರ ಜೀವನ ನಿರ್ವಹಣೆಗೆ ಮಾಸಾಶನ ನೀಡುವ ಬಗ್ಗೆ ಗಮನಹರಿಸಬೇಕಿದೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಯಕ್ಷರಂಗದ ಅನೇಕ ಕಲಾವಿದರು ಕಲೆಯನ್ನು ದೇಶ-ವಿದೇಶಗಳಲ್ಲಿ ಪ್ರಖ್ಯಾತಿಗೆ ತರಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಸನ್ಮಾನಿತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತನಾಡಿ, ಪ್ರಶಸ್ತಿ ಸನ್ಮಾನಗಳಿಗಿಂತ ಅಭಿಮಾನಿಗಳ ಹೃದಯದಲ್ಲಿ ನೆಲೆಸುವುದು ಪ್ರತಿಯೊಬ್ಬ ಕಲಾವಿದನ ಇಚ್ಛೆಯಾಗಿರುತ್ತದೆ. ಅಭಿಮಾನಿಗಳಿಲ್ಲದ ಕಲಾವಿದನ ಬದುಕು ಶೂನ್ಯ. ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಬಂದದ್ದಲ್ಲ. ಯಕ್ಷಗಾನ ಲೋಕಕ್ಕೆ ಸಂದ ಗೌರವವಾಗಿದೆ ಎಂದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಅನಂತ ಹೆಗಡೆ ಗಂಗೆಮನೆ, ಅಬಸೆ ಎನ್.ದಿನೇಶ್‌ಕುಮಾರ್ ಜೋಷಿ ಹಾಜರಿದ್ದರು. ಗಣಪತಿ ಶಿರಳಗಿ ಸ್ವಾಗತಿಸಿದರು. ಪ್ರತೀಕ್ಷಾ ಜಿ. ವಂದಿಸಿದರು. ಆಶಾ ಹೆಗಡೆ  ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.