ADVERTISEMENT

ರಾಜ್ಯ ಸರ್ಕಾರದಿಂದ ನೀರಾವರಿಗೆ ಸಿಗದ ಪರಿಹಾರ: ಕುಮಾರ್ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 6:34 IST
Last Updated 27 ಫೆಬ್ರುವರಿ 2018, 6:34 IST

ಸೊರಬ: ರಾಜ್ಯ ಸರ್ಕಾರದಿಂದ ಐದು ವರ್ಷಗಳ ಅವಧಿಯಲ್ಲಿ ಮಹದಾಯಿ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳ ಕುರಿತು ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಕುಮಾರ್‌ ಬಂಗಾರಪ್ಪ ದೂರಿದರು.

ತಾಲ್ಲೂಕಿನ ಮೂಡಿ, ಮೂಗೂರು, ಕಚವಿ, ಗುಡವಿ ಏತ ನೀರಾವರಿ ಹಾಗೂ ದಂಡಾವತಿ ಯೋಜನೆ ಅನುಷ್ಠಾನ ತುರ್ತಾಗಿ ಆಗಬೇಕಾಗಿದೆ. ಆದರೆ, ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಯೋಜನೆಗಳ ಅನುಷ್ಠಾನದಲ್ಲೂ ರಾಜಕೀಯ ನಡೆಯುತ್ತಿದೆ. ಸಾರ್ವಜನಿಕರ ಹಣದಲ್ಲಿ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುತ್ತಿರುವ ಸರ್ಕಾರದ ಕ್ರಮ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಶಾಸನ ಸಭೆಯ ಚರ್ಚೆಯ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಂಜುನಾಥ್ ಗೌಡ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸುವಾಗ ಶಾಸಕ ಮಧು ಬಂಗಾರಪ್ಪ ಅವರಿಗೆ ಕಿಮ್ಮನೆ ರತ್ನಾಕರ್‌ ಅವರು ಏಕ ವಚನ ಬಳಸಿ ಅವಮಾನ ಮಾಡಿರುವುದು ಪ್ರಜಾಪ್ರಭುತ್ವದ ದುರಂತ’ ಎಂದು ಕುಟುಕಿದರು.

ADVERTISEMENT

ಮಂಜುನಾಥ್ ಗೌಡ ಅವರು ಶಾಸಕ ಮಧು ಬಂಗಾರಪ್ಪ ಅವರ ಚುನಾವಣಾ ಖರ್ಚನ್ನು ನೋಡಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂಬ ಕಿಮ್ಮನೆ ರತ್ನಾಕರ್ ಅವರ ಆರೋಪದಿಂದ ಮುಂದಿನ ಚುನಾವಣೆ ತಾಲ್ಲೂಕಿನಲ್ಲಿ ಯಾವ ರೀತಿಯಲ್ಲಿ ನಡೆಯಬಹುದು ಎಂದು ಊಹಿಸಿಕೊಳ್ಳಬಹುದು.

ಹೀಗಾಗಿ ತಾಲ್ಲೂಕಿನ ಜನ ಎಚ್ಚೆತ್ತುಕೊಳ್ಳಬೇಕು. ತಾಲ್ಲೂಕಿಗೆ ನೀರಾವರಿ ಯೋಜನೆಗಳು, ಹೊಸ ಸರ್ಕಾರಿ ಕಟ್ಟಡಗಳಿಗೆ ಅನುದಾನ ತರುವಲ್ಲಿ ಶಾಸಕ ಮಧು ಬಂಗಾರಪ್ಪ ವಿಫಲರಾಗಿದ್ದಾರೆ ಎಂದು ದೂರಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ಎಂ.ಡಿ.ಉಮೇಶ್, ಟಿ.ಆರ್.ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.