ಶಿವಮೊಗ್ಗ: ದುಷ್ಕೃತ್ಯ ನಡೆಸಲು ಭಯೋತ್ಪಾದಕರ ಮೊದಲ ಆಯ್ಕೆ ವಿಮಾನ ಅಪಹರಣ. ವಿಮಾನ ಅಪಹರಣ ಘಟನೆಗಳು ದೇಶದ ಭದ್ರತೆ ಹಾಗೂ ಪ್ರತಿಷ್ಠೆಗೆ ಸವಾಲು.
ಅಮೆರಿಕಾದಂತಹ ದೇಶ ಸಹ ವಿಮಾನ ಅಪಹರಣದಿಂದ ಪಾರಾಗಲು ಸಾಧ್ಯವಾಗಿಲ್ಲ. 2001ರಲ್ಲಿ ವಿಮಾನ ಅಪಹರಿಸಿ, ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಇಂದಿಗೂ ಜಗತ್ತನ್ನು ಕಾಡುತ್ತಿದೆ. ಅಂತಹ ಘಟನೆ ಮತ್ತೆ ಇನ್ನೆಂದೂ ನಡೆಯದಿರಲಿ ಎಂದು ಜನರು ಪ್ರಾರ್ಥಿಸುತ್ತಾರೆ.
ವಿಮಾನಗಳನ್ನು ಭಯೋತ್ಪಾದಕರು ಅಪಹರಿಸದಂತೆ ತಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಉಪಕರಣ ಅಳವಡಿಸಿದ್ದಲಿ ಭಯೋತ್ಪಾದಕರು ವಿಮಾನ ಅಪಹರಿಸುವುದಿರಲಿ, ಜೀವ ಉಳಿಸಿಕೊಂಡು, ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.
ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಬಿ.ಸಿ.ಶ್ರೀಧರ್, ಎ.ಎನ್.ನವೀನ್,ಎಸ್.ಡಿ.ಸಚಿನ್, ಎನ್.ಜಿ.ಭರತ್ ‘ Anty airocraft hyjack atomation technolgy’ ಎಂಬ ಉಪಕರಣ ತಯಾರಿಸಿದ್ದಾರೆ.
ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ, ಬಂದರು, ಹಡಗು, ಬ್ಯಾಂಕುಗಳು, ಚಿನ್ನಾಭರಣ ಅಂಗಡಿಗಳು ಹಾಗೂ ಉನ್ನತಮಟ್ಟದ ರಕ್ಷಣೆ ಬಳಸುವ ಪ್ರದೇಶಗಳಲ್ಲಿ ಈ ತಂತ್ರಾಜ್ಞಾನ ಆಧಾರಿತ ಉಪಕರಣ ಅಭಿವೃದ್ಧಿಪಡಿಸಿ, ಬಳಸಬಹುದಾಗಿದೆ.
ಈ ಮೂಲಕ ಯಾವುದೇ ಪ್ರಾಣ ಹಾಗೂ ಹೆಚ್ಚಿನ ಆಸ್ತಿ ಹಾನಿ ಆಗದಂತೆ ತಡೆಯಬಹುದು. ಅದೂ ಕೂಡ ಹೆಚ್ಚಿನ ವೆಚ್ಚವಿಲ್ಲದೇ ನಿಖರವಾಗಿ ಕಾರ್ಯಾಚರಣೆ ಮಾಡಬಹುದು. ಜತೆಗೆ, ಇದು ಗರಿಷ್ಠ ಸುರಕ್ಷತೆ ಒದಗಿಸಲಿದೆ.
ಏನಿದು ಉಪಕರಣ?
‘Anty airocraft hyjack atomation technolgy’ ಒಂದು ಪ್ರೋಗ್ರಾಂ ಮಾಡಲಾಗಿರುವ ಕಂಪ್ಯೂಟರ್ ಆಧಾರಿತ ಕಾರ್ಯ ನಿರ್ವಹಣೆ ಮಾಡುವ ಉಪಕರಣ.
ವಿಮಾನ ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಅದರ ಲಕ್ಷಣಗಳು ಹೇಗೆ ಇರುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ವಿಮಾನದಲ್ಲಿ ಇರುವ ಶಬ್ದ, ತಾಪಮಾನ, ಪ್ರಯಾಣಿಕರ ಚಲನವಲನ, ಮಾತಿನ ಧಾಟಿ ಹಾಗೂ ಇತರ ಲಕ್ಷಣಗಳನ್ನು ಆಧರಿಸಿ ಪ್ರೋಗ್ರಾಂ ಸಿದ್ಧಪಡಿಸಲಾಗಿರುತ್ತದೆ.
ವಿಮಾನ ಅಪಹರಣಕ್ಕೆ ಒಳಗಾದಾಗ ಯಾವ ರೀತಿಯ ಬದಲಾವಣೆಗಳು ಇರುತ್ತವೆ ಎಂಬ ವಿವರಗಳನ್ನೂ ಪ್ರೋಗ್ರಾಂನಲ್ಲಿ ಬರೆ ಯಲಾಗಿರುತ್ತದೆ. ಈ ಪ್ರೋಗಾಂ ಹೊಂದಿರುವ ಕಂಪ್ಯೂಟರ್‌ಗೆ ಎಚ್‌ಡಿ ಗುಣಮಟ್ಟದ ಯುಎಸ್‌ಬಿ ಕ್ಯಾಮೆರಾ ಅಳವಡಿಸಿ, ವಿಮಾನದ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನಕಣ್ಣಿಡಲಾಗುತ್ತದೆ.
ವಿಮಾನ ಅಪಹರಿಸಲು ದುಷ್ಕರ್ಮಿಗಳು ಪ್ರಯತ್ನಿಸಿದಲ್ಲಿ ಅಥವಾ ವಿಮಾನದ ವಾತಾವರಣದಲ್ಲಿ ಬದಲಾವಣೆ ಉಂಟಾದಲ್ಲಿ ಕಂಪ್ಯೂಟರ್ ತಕ್ಷಣ ಗ್ರಹಿಸಿ, ಪ್ರೋಗ್ರಾಂನಲ್ಲಿ ಇರುವ ವಿಮಾನದ ಸಾಮಾನ್ಯ ಲಕ್ಷಣಕ್ಕೂ, ಅಪಹರಣಕ್ಕೆ ಒಳಗಾದಾಗ ಇರುವ ಲಕ್ಷಕ್ಕೂ ಕ್ಷಣಾರ್ಧದಲ್ಲಿ ತಾಳೆ ಹಾಕಿ, ವಿಮಾನ ಅಪಹರಣಕ್ಕೆ ಒಳಗಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ.
ಒಂದು ವೇಳೆ ವಿಮಾನ ಅಪಹರಣಕ್ಕೆ ಒಳಗಾಗಿದ್ದಲ್ಲಿ, ತಕ್ಷಣ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ರವಾನಿಸುತ್ತದೆ. ಕಿಡಿಗೇಡಿಗಳಿಗೂ ಎಚ್ಚರಿಕೆ ನೀಡುತ್ತದೆ. ಇದನ್ನೂ ಮೀರಿ ದುಷ್ಕರ್ಮಿಗಳು ವಿಮಾನ ಅಪಹರಣಕ್ಕೆ ಪ್ರಯತ್ನಿಸಿದಲ್ಲಿ, ಕಿಡಿಗೇಡಿಗಳಿಗೇ ನೇರ ಗುರಿ ಇಟ್ಟು ಶೂಟ್ ಮಾಡುವಂತೆ ಪ್ರೋಗ್ರಾಂ ಮಾಡಲಾಗಿದೆ.
ಈ ಉಪಕರಣದಲ್ಲಿ ಗನ್ ಬದಲಿಗೆ ಹೈವೋಲ್ಟೇಜ್ ವಿದ್ಯುತ್ ಶಾಕ್ ಕೊಡುವ, ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಬಹುದಾದ ಆಯುಧಗಳನ್ನು ಬಳಸಬಹುದು. ಇದರ ನೆರವಿನಿಂದ ಕಿಡಿಗೇಡಿಗಳನ್ನು ಜೀವಂತವಾಗಿ ಹಿಡಿದು, ಹೆಚ್ಚಿನ ವಿಚಾರಣೆ ನಡೆಸಬಹುದು. ಮುಂದೆ ಆಗುವ ಅಪಾಯಗಳನ್ನೂ ತಡೆಯಬಹುದು.
ಯಾವ ಸ್ಥಳದಲ್ಲಿ ಈ ಉಪಕರಣ ಅಳವಡಿಸುವ ಉದ್ದೇಶ ಇದೆಯೋ, ಆ ಸ್ಥಳದ ಲಕ್ಷಣಗಳನ್ನು ಆಧರಿಸಿ, ಪ್ರೋಗ್ರಾಂಗಳನ್ನು ಬರೆದು ಉಪಯೋಗಿಸಬಹುದು ಎಂದು ಮಾಹಿತಿ ನೀಡುತ್ತಾರೆ ಮಾರ್ಗದರ್ಶಕರಾದ ಪ್ರೊ.ಶರತ್ ಹಾಗೂ ಪ್ರೊ.ಅನಿಲ್.
ಈ ಉಪಕರಣ ಅಭಿವೃದ್ಧಿಪಡಿಸಲು ಸುಮಾರು ರೂ 50 ಸಾವಿರ ಖರ್ಚು ತಗುಲುತ್ತದೆ. ಪ್ರೋಗ್ರಾಂ ಮತ್ತು ಕಂಪ್ಯೂಟರ್‌ನ ಸಾಮರ್ಥ್ಯ ಹಾಗೂ ಬಳಸಿಕೊಳ್ಳುವ ಆಯುಧದ ಆಧಾರದಲ್ಲಿ ವೆಚ್ಚ ಹೆಚ್ಚು ಕಡಿಮೆ ಆಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.