ಶಿವಮೊಗ್ಗ: ಶಿಕ್ಷಕರ ನೇಮಕದಲ್ಲೂ ಭ್ರಷ್ಟಾಚಾರ, ಜಾತೀಯತೆ, ಪ್ರಾದೇಶಿಕ ಭಾವನೆಗಳು ಮುಖ್ಯವಾಗುವುದರಿಂದ ಉತ್ತಮ ಶಿಕ್ಷಕರ ನೇಮಕ ಆಗುತ್ತಿಲ್ಲ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಕುಮಾರ್ ವಿಷಾದಿಸಿದರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿಯಲ್ಲಿ ಬುಧವಾರ ನಡೆದ 24ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಮನುಷ್ಯನ ವಿದ್ಯಾಭ್ಯಾಸದ ಪ್ರಕ್ರಿಯೆಯಲ್ಲಿ ಶಿಕ್ಷಕನೇ ಕೇಂದ್ರ ಬಿಂದು. ವಿದ್ಯಾಭ್ಯಾಸ ಗುಣಮಟ್ಟದ್ದಾಗಿರಬೇಕಾದರೆ ಒಳ್ಳೆಯ ಶಿಕ್ಷಕರ ಅವಶ್ಯಕತೆ ಇದೆ. ಇಂದು ಶಿಕ್ಷಕರ ಕೆಲಸವೂ ಒಂದು ವ್ಯಾಪಾರವಾಗಿದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ನಾವು ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ವ್ಯಕ್ತಿತ್ವ ವಿಕಸನ ಮಾಡಬೇಕಾದ ಶಿಕ್ಷಣ ಇಂದು ಹಣ ಗಳಿಕೆಯ ಸಾಧನವಾಗಿದೆ. ಈ ಮನೋಭಾವ ವಿದ್ಯಾವಂತರೆಂದು ಎನಿಸಿಕೊಂಡವರಲ್ಲೇ ಹೆಚ್ಚು. ಅವರು ಪಡೆದುಕೊಂಡಿರುವ ವಿದ್ಯೆ ಅವರ ವ್ಯಕ್ತಿತ್ವದ ಮೇಲೆ ಏನೂ ಪರಿಣಾಮ ಬೀರಿಲ್ಲ. ಆದ್ದರಿಂದ ಅವರು ಪಡೆದ ವಿದ್ಯೆಯಲ್ಲಿಯೇ ದೋಷ ಇದೆ ಎಂದು ಕಾಣುತ್ತದೆ ಎಂದು ವಿಶ್ಲೇಷಿಸಿದರು.
ರಾಷ್ಟ್ರೀಯ ಕರ್ತವ್ಯಪ್ರಜ್ಞೆ ಉಂಟು ಮಾಡಬಲ್ಲಂತಹ ಶಿಕ್ಷಣ ನಮಗೆ ಬೇಕಾಗಿದೆ. ಸೇವೆ ಮತ್ತು ತ್ಯಾಗದ ಕಡೆ ಅವರ ಮನಸ್ಸು ಹರಿಯುವಂತಿರಬೇಕು. ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಹಿತಾಸಕ್ತಿ ಮೂಡಿಸುವಂತಿರಬೇಕು ಎಂದು ಸಲಹೆ ಮಾಡಿದರು.
ವಿದ್ಯಾಭ್ಯಾಸದ ಮೂಲ ಧ್ಯೇಯ ಒಬ್ಬ ವ್ಯಕ್ತಿಯ ಚಾರಿತ್ರ್ಯವನ್ನು ಬೆಳೆಸುವುದು ಮತ್ತು ಯುವಕ–ಯುವತಿಯರಲ್ಲಿ ಪರಿವರ್ತನೆಯನ್ನು ತರುವುದು. ಚಾರಿತ್ರ್ಯವಿಲ್ಲದೆ ಯಾವುದೇ ದೇಶ ಉಳಿಯಲು ಸಾಧ್ಯವಿಲ್ಲ. ಈ ಸಚ್ಚಾರಿತ್ರ್ಯವನ್ನು ಬೆಳೆಸುವ ಮತ್ತು ಪೋಷಿಸುವ ವಿದ್ಯಾಭ್ಯಾಸ ಕ್ರಮವನ್ನು ರೂಢಿಸಿಕೊಳ್ಳದಿದ್ದರೆ ಗ್ರೀಕ್ ಮತ್ತು ರೋಮನ್ ನಾಗರಿಕತೆಯ ದಾರಿಯಲ್ಲೇ ನಮ್ಮ ಸಂಸ್ಕೃತಿಯೂ ಮಾಯವಾಗಿ ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಘಟಿಕೋತ್ಸವದಲ್ಲಿ 3,938 ಪುರುಷರು ಹಾಗೂ 6,376 ಮಹಿಳೆಯರು ಸೇರಿ ಒಟ್ಟು 10,314 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡ ಲಾಯಿತು. ದೂರಶಿಕ್ಷಣ ನಿರ್ದೇಶನಾಲಯದಿಂದ 13,226 ಪುರುಷರು ಹಾಗೂ 12,268 ಮಹಿಳೆಯರು ಸೇರಿ ಒಟ್ಟು 25,494 ವಿದ್ಯಾರ್ಥಿಗಳಿಗೆ ನೀಡಲಾಯಿತು.
ಘಟಿಕೋತ್ಸವದಲ್ಲಿ 109 ಸ್ವರ್ಣ ಪದಕಗಳನ್ನು 16 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡರು. ಶಿವಮೊಗ್ಗದ ಕಮಲಾ ನೆಹರೂ ಮಹಿಳಾ ಕಾಲೇಜಿನ ಕೆ.ಎಸ್.ಅರ್ಪಿತಾ ಅತಿ ಹೆಚ್ಚು 5 ಸ್ವರ್ಣ ಪದಕ ಪಡೆದರು. ಶಂಕರಘಟ್ಟದ ಸ್ನಾತಕೋತ್ತರ ಪದವಿ ಕನ್ನಡ ವಿಭಾಗದ ಬಿ.ಡಿ.ಅಪರ್ಣಾ 4 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದರು. ಸ್ನಾತಕೋತ್ತರ ಪದವಿಯಲ್ಲಿ ಕೆ.ಪಿ. ಭವ್ಯಾ (ಕನ್ನಡ), ರಾಬಿಯಾ ಬಸ್ರಿ (ಉರ್ದು) ತಲಾ 4 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ ಪಡೆದುಕೊಂಡರು.
ಹಾಗೆಯೇ, ಶಂಕರಘಟ್ಟದ ಜೈವಿಕ ತಂತ್ರಜ್ಞಾನದ ವಿಭಾಗದಲ್ಲಿ ಕೆ.ಸಿ.ಸುಪ್ರವಾಣಿ, 4 ಸ್ವರ್ಣಪದಕ, ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದ ಗೋವೆರಹಳ್ಳಿ ಸ್ವಾತಿ 3 ಸ್ವರ್ಣ ಪದಕ ಹಾಗೂ 1ನಗದು ಬಹುಮಾನ ಪಡೆದರು. ಇಬ್ಬರು ಪುರುಷರು ಹಾಗೂ ಮೂರು ಮಹಿಳೆಯರು ತಲಾ 3 ಸ್ವರ್ಣ ಪದಕ ಹಂಚಿಕೊಂಡರು. ಕೆ.ಎನ್. ಸುಬ್ರಹ್ಮಣ್ಯ (ಸಮಾಜಶಾಸ್ತ್ರ), ರಾಮೇಗೌಡ ಸಿದ್ದನಗೌಡ ಪಾಟೀಲ್ (ಎಂ.ಬಿ.ಎ.), ಚೈತ್ರ ಎನ್.ಎಸ್.ಮೂರ್ತಿ (ಇಂಗ್ಲಿಷ್), ಎಸ್.ಅಕ್ಷತಾ (ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ), ಯು. ದಶಮಿ (ಎಂಸಿಎ) ಪಡೆದರು. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಬಾರಿ, ಕುಲಸಚಿವರಾದ ಪ್ರೊ.ಮಲ್ಲಿಕಾ ಎಸ್. ಘಂಟಿ (ಆಡಳಿತ), ಪ್ರೊ.ಎಚ್.ಎಸ್.ಭೋಜ್ಯಾನಾಯ್ಕ (ಮೌಲ್ಯಮಾಪನ) ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.