ADVERTISEMENT

ಸಮುದಾಯದ ಅನನ್ಯತೆ ಕಾಪಾಡಿದ ಮಾಸ್ತರ್

​ಪ್ರಜಾವಾಣಿ ವಾರ್ತೆ
Published 19 ಮೇ 2012, 6:25 IST
Last Updated 19 ಮೇ 2012, 6:25 IST
ಸಮುದಾಯದ ಅನನ್ಯತೆ ಕಾಪಾಡಿದ ಮಾಸ್ತರ್
ಸಮುದಾಯದ ಅನನ್ಯತೆ ಕಾಪಾಡಿದ ಮಾಸ್ತರ್   

ಸಾಗರ: ಸಮುದಾಯದ ಅನನ್ಯತೆಯನ್ನು ಗುರುತಿಸಿ ಅದನ್ನು ಕಾಪಾಡುವಲ್ಲಿ ಅಪರೂಪದ ಕಾಳಜಿ ತೋರುತ್ತಿರುವ ವಿಶಿಷ್ಟ ವ್ಯಕ್ತಿ ಎನ್. ಹುಚ್ಚಪ್ಪ ಮಾಸ್ತರ್ ಎಂದು ಹಂಪಿ ಕನ್ನಡ ವಿವಿ ಪ್ರಭಾರ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

75 ವರ್ಷ ತುಂಬಿದ ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್ ಹಾಗೂ ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ  ಮಾಸ್ತರ್ ಕುರಿತು ಪ್ರಕಟಿಸಿರುವ `ಉರಿಯ ಬೆಳದಿಂಗಳು~  ಅಭಿನಂದನಾ ಗ್ರಂಥವನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಮ್ಮ ನೆಲಮೂಲ ಸಂಸ್ಕೃತಿಗಳ ಅನನ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾದ ಸಂಗತಿ. ಅಭಿವೃದ್ಧಿಯ ಪರಿಕಲ್ಪನೆ ಈ ಹಿನ್ನೆಲೆಯಲ್ಲೆ ಆಗಬೇಕು. ಇಂತಹ ಅಭಿವೃದ್ಧಿ ಮಾದರಿಗಳ ಬಗ್ಗೆ ಹುಚ್ಚಪ್ಪ ಮಾಸ್ತರ್ ಅವರಿಗೆ ಅಚಲ ನಂಬಿಕೆ ಇರುವುದರಿಂದ ಅವರೊಬ್ಬ ದೂರದೃಷ್ಟಿಯುಳ್ಳ ಸಾಮಾಜಿಕ ಚಿಂತಕರಾಗಿದ್ದಾರೆ ಎಂದರು.

ಅನುಭವಗಳನ್ನು ಪಕ್ಕಕ್ಕೆ ಸರಿಸಿ ಶೈಕ್ಷಣಿಕ ಪದವಿ  ಪಡೆದವರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಸಾಮಾಜಿಕ ದುರಂತವಾಗಿದೆ. ಹುಚ್ಚಪ್ಪ ಮಾಸ್ತರ್ ದೊಡ್ಡ ಪದವಿ ಪಡೆಯದೆ ಇದ್ದರೂ ಅವರ ಜೀವನಾನುಭವ, ತಿಳಿವಳಿಕೆ, ಜ್ಞಾನ, ಸೂಕ್ಷ್ಮತೆ ಈ ನಾಡಿನ ಬಹುದೊಡ್ಡ ಸಾಹಿತಿ ಮತ್ತು ಚಿಂತಕರಿಗೆ ಇರುವಂತಹದ್ದು ಎಂದು ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಮಾಜಿಕ ಕಳಕಳಿ ಇದ್ದಲ್ಲಿ ಸಮಾಜದ ತಳವರ್ಗದವರಿಗೆ ಯಾವ ರೀತಿಯ ಸೇವೆ ಸಲ್ಲಿಸಬಹುದು ಎನ್ನುವುದಕ್ಕೆ ಹುಚ್ಚಪ್ಪ ಮಾಸ್ತರ್ ಅವರ ಜೀವನ ಅತ್ಯುತ್ತಮ ನಿದರ್ಶನವಾಗಿದೆ. ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅನುಕರಣೀಯವಾದದ್ದು ಎಂದರು.

ಅಭಿನಂದನಾ ಭಾಷಣ ಮಾಡಿದ ಸಾಹಿತಿ ಡಾ.ನಾ. ಡಿಸೋಜ, ಸಾಂಸ್ಕೃತಿಕವಾಗಿ ಅತ್ಯಂತ ಗಟ್ಟಿಯಾದ ನೆಲೆಗಟ್ಟನ್ನು ಹೊಂದಿರುವ ದೀವರ ಜನಾಂಗದ ಸಮೃದ್ಧ ಪರಂಪರೆಯ ಹಿನ್ನೆಲೆ ಹುಚ್ಚಪ್ಪ ಮಾಸ್ತರ್ ಅವರ ಜಾನಪದ ಪ್ರತಿಭೆ ಅರಳಲು ಸಾಧ್ಯ ಮಾಡಿಕೊಟ್ಟಿದೆ ಎಂದು ಹೇಳಿದರು.

ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ,  ಉದ್ಯಮಿ ಸಿ. ಗೋಪಾಲಕೃಷ್ಣ ರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಹಾಜರಿದ್ದರು.
ಉಷಾರಾಣಿ ಪ್ರಾರ್ಥಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಟಿ. ರಘುಪತಿ ಸ್ವಾಗತಿಸಿದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕ ಮಾತನಾಡಿದರು. ಈಶ್ವರ್‌ನಾಯ್ಕ ಕುಗ್ವೆ ವಂದಿಸಿದರು. ಪ್ರೇಮ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಕಣಜ ತಂಡದವರು ದೇವೇಂದ್ರ ಬೆಳೆಯೂರು ಅವರ ನಿರ್ದೇಶನದಲ್ಲಿ  `ಸಂಗ್ಯಾಬಾಳ್ಯಾ~ ನಾಟಕವನ್ನು ಪ್ರದರ್ಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.