ADVERTISEMENT

ಸಮ್ಮೇಳನದ ಯಶಸ್ಸಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 5:51 IST
Last Updated 24 ಡಿಸೆಂಬರ್ 2013, 5:51 IST

ಸಾಗರ: ಮಡಿಕೇರಿಯಲ್ಲಿ ಬರುವ ಜ.7ರಿಂದ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಅವರಿಗೆ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಪರಿಷತ್ತಿನ ಪರವಾಗಿ ಸೋಮವಾರ ಅವರಿಗೆ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.

 ಈ ಹಿಂದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಡಿಸೋಜ ಅವರ ಮನೆಗೆ ಬಂದಿದ್ದೆ. ಡಿಸೋಜ ಅವರ ಸರಳತೆ, ಸಜ್ಜನಿಕೆ ನೋಡಿ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ನನ್ನ ಅವಧಿಯಲ್ಲಿ ಡಿಸೋಜ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ನಿಶ್ಚಯಿಸಿದ್ದೆ. ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಅವರನ್ನು ಅಧ್ಯಕ್ಷರಾಗಿ ಆರಿಸಿದ್ದು ಸಂತೋಷ ತಂದಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಕಾರ್ಯದರ್ಶಿ ಜಿ.ನಾಗೇಶ್, ವಿ.ಶಂಕರ್, ಸಾಹಿತಿ ಕಾಳೇಗೌಡ ನಾಗವಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್ ಗಂಟೆ, ರಂಗಕರ್ಮಿ ಕಾಗೋಡು ಅಣ್ಣಪ್ಪ, ಮಡಿಕೇರಿ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT