ADVERTISEMENT

ಸಿದ್ದರಾಮಯ್ಯ ಸರ್ಕಾರ ಬಡವರ ಆತ್ಮವಿಸ್ವಾಸ ಹೆಚ್ಚಿಸಿದೆ;ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:29 IST
Last Updated 24 ಡಿಸೆಂಬರ್ 2017, 5:29 IST
ತೀರ್ಥಹಳ್ಳಿಯಲ್ಲಿ ಶನಿವಾರ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಧಾರವಾಡದ ಸೀಕಾಡ್‌ ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿದರು
ತೀರ್ಥಹಳ್ಳಿಯಲ್ಲಿ ಶನಿವಾರ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಧಾರವಾಡದ ಸೀಕಾಡ್‌ ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿದರು   

ತೀರ್ಥಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೋಷಿತ ವರ್ಗದ ಜನರ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅರ್ಧ ಗಂಟೆಯೊಳಗೆ ಬಡವರ ₹ 4,200 ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕಿಮ್ಮನೆ ರತ್ನಾಕರ ಅವರು ಹೇಳಿದರು.

ಶನಿವಾರ ಪಟ್ಟಣದ ಕಟ್ಟೆ ಕಾಂಪ್ಲೆಕ್ಸ್‌ನಲ್ಲಿ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಧಾರವಾಡದ ಸೀಕಾಡ್‌ ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ಉಧ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡ ಉದ್ದಿಮೆದಾರರ ₹ 5 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಬಗ್ಗೆ ಚಕಾರ ಎತ್ತದವರು ಬಡವರಿಗೆ ನೀಡುವ ಸೌಲಭ್ಯಗಳ ಕುರಿತು ಹುಯಿಲೆಬ್ಬಿಸುತ್ತಿರುವುದು ಖಂಡನೀಯ ಎಂದರು.

ADVERTISEMENT

ಬಡವರು, ನಿರುದ್ಯೋಗಿಗಳು, ವಿಧವೆಯರು, ಮನೆಕೆಲಸದ ಜೊತೆಯಲ್ಲಿ ಇತರೆ ಉದ್ಯೋಗ ಮಾಡುವ ಸಲುವಾಗಿ ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರ ₹ 4,500 ಕೋಟಿ ಹಣ ಬಿಡುಗಡೆ ಮಾಡಿದೆ. ಸಬ್ಸಿಡಿಯೊಂದಿಗೆ ಸಾಲದ ನೆರವನ್ನೂ ಹೊಂದಿರುವ ಈ ಯೋಜನೆಯಲ್ಲಿ ತಾಲ್ಲೂಕಿನ 844 ಫಲಾನುಭವಿಗಳಿಗೆ ₹ 5 ಕೋಟಿ ಹಣ ಬಂದಿದೆ. ಫಲಾನುಭವಿಗಳು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಸತಿ ಸಚಿವರಿಗೆ ಮಾಡಿಕೊಂಡ ಮನವಿ ಮೇರೆಗೆ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 900 ಮನೆಗಳನ್ನು ಮಂಜೂರು ಮಾಡಿದ್ದಾರೆ.ಇವುಗಳಲ್ಲಿ 500 ಮನೆಗಳನ್ನು ದೇವರಾಜ ಅರಸು ಹೆಸರಿನಲ್ಲಿ ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ವಿತರಿಸಲಾಗುವುದು. 3 ಸಾವಿರ ಮನೆಗಳನ್ನು ಈಗಾಗಲೇ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಈ ಹಂಚಿಕೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸಿಲ್ಲ ಎಂದು ಕಿಮ್ಮನೆ ಹೇಳಿದರು.

ಶಾಂತವೇರಿ ಗೋಪಾಲಗೌಡ, ಕಡಿದಾಳ್‌ ಮಂಜಪ್ಪ, ಯು.ಆರ್‌.ಅನಂತಮೂರ್ತಿ, ಹಾ.ಮಾ.ನಾಯಕ ಮುಂತಾದ ಗಣ್ಯರನ್ನು ಸ್ಮರಿಸುವ ಹಾಗೂ ಅವರ ಹೆಸರನ್ನು ಶಾಸ್ವತಗೊಳಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗಿದೆ. ಪಕ್ಷಪಾತ ಧೋರಣೆ ಅನುಸರಿಸದೇ ಎಲ್ಲರನ್ನೂ ಸಮನಾಗಿ ಕಾಣುವ ಮನೋಭಾವನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಕಿಮ್ಮನೆ ಹೇಳಿದರು. ವೇದಿಕೆಯಲ್ಲಿ ಸಿಕಾಡ್‌ ಸಂಸ್ಥೆಯ ಕಿರಣ್‌ ಮಹೇಂದ್ರಕರ್‌, ರವಿ, ಪ್ರಮೋದ್‌ ಕೊಟಗಿ, ಎಸ್‌.ಆರ್‌.ದೇಸಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.