ಕಾರ್ಗಲ್: ರಾಜ್ಯಕ್ಕೆ ಬೆಳಕು ನೀಡುವ ನಿಟ್ಟಿನಲ್ಲಿ ಶರಾವತಿ ಕಣಿವೆಯಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ಮಹಾತ್ಮ ಗಾಂಧಿ ವಿದ್ಯುದಾಗಾರ ದಿನದಿಂದ ದಿನಕ್ಕೆ ತನ್ನ ಗತವೈಭವವನ್ನು ಕಳೆದುಕೊಂಡು ಸೊರಗುತ್ತಿದೆ.
ಮೈಸೂರು ಮಹಾರಾಜರ ಕಾಲದಲ್ಲಿ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಕನಸಿನ ಫಲವಾಗಿ ರೂಪುಗೊಂಡ ಮಹಾತ್ಮಗಾಂಧಿ ವಿದ್ಯುದಾಗಾರ, 8 ವಿದ್ಯುತ್ ಘಟಕಗಳ ಸ್ಥಾಪನೆಯೊಂದಿಗೆ ಕಾರ್ಯಾರಂಭಗೊಂಡಿತ್ತು.
ಮಹತ್ವಾಕಾಂಕ್ಷೆಯ ಈ ಘಟಕಗಳು ನಾಡಿಗೆ ಸುದೀರ್ಘವಾದ ಸೇವೆಯನ್ನು 50 ವರ್ಷಗಳಿಂದಲೂ ನೀಡುತ್ತಾ ಬಂದಿರುತ್ತಿದೆ. ಸಂಪೂರ್ಣ ರಷ್ಯಾದ ತಂತ್ರಜ್ಞಾನಗಳನ್ನು ಹೊಂದಿರುವ ಎಂಜಿಎಚ್‌ಇ ವಿದ್ಯುತ್ ಸ್ಥಾವರದಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳು ಕಣಿವೆಯ ಆಳದ ವಿದ್ಯುತ್ ಕೇಂದ್ರವನ್ನು ತಲುಪಲು ಬ್ರಿಟಿಷ್ ಎಂಜಿನಿಯರ್‌ಗಳ ತಾಂತ್ರಿಕತೆಯಲ್ಲಿ ಟ್ರಾಲಿಗಳನ್ನು ಅಳವಡಿಸಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದೆ.
ಕರ್ನಾಟಕ ವಿದ್ಯುತ್ ಮಂಡಳಿ, ವಿಶ್ವೇಶ್ವರಯ್ಯ ವಿದ್ಯುತ್ ನಿಗಮ, ಮೆಸ್ಕಾಂ, ನಂತರ ಹಾಲಿ ಈಗ ಕರ್ನಾಟಕ ವಿದ್ಯುತ್ ನಿಗಮದ ಮೇಲ್ವಿಚಾರಣೆಗೆ ಒಳಪಟ್ಟಿರುವ ವಿದ್ಯುತ್ ಸ್ಥಾವರ ಇತ್ತೀಚೆಗಿನ ದಿನಗಳಲ್ಲಿ ಸಂಪೂರ್ಣ ಸೊರಗುತ್ತಾ ಬರುತ್ತಿರುವುದು ವಿಪರ್ಯಾಸವೇ ಸರಿ.
140 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದ್ದ ಮಹಾತ್ಮಗಾಂಧಿ ವಿದ್ಯುದಾಗಾರದಲ್ಲಿ 8 ಘಟಕಗಳು ಈ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಇಂದು ಕೇವಲ 2ರಿಂದ 3 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 30ರಿಂದ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತಿದೆ. ಉಳಿದ ಘಟಕಗಳು ದುರಸ್ತಿ ನೆಪದಲ್ಲಿ ನೇಪಥ್ಯಕ್ಕೆ ಸರಿದಿವೆ. 75 ವರ್ಷಕ್ಕೂ ಹೆಚ್ಚು ಕಾಲ ಸೇವೆ ನೀಡುತ್ತಾ ಬಂದು ಅತ್ಯಂತ ಜನಪ್ರಿಯತೆ ಗಳಿಸಿದ್ದ ಟ್ರಾಲಿಗಳು ತನ್ನ ಮೂಲ ತಂತ್ರಜ್ಞಾನ ಕಳೆದುಕೊಂಡು ಸೇವೆ ನಿರ್ವಹಿಸುತ್ತಾ ಕಾರ್ಮಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.
400ಕ್ಕೂ ಅಧಿಕ ಕೆಇಬಿ ಸಿಬ್ಬಂದಿ ಹೊಂದಿದ್ದ ಎಂಜಿಎಚ್‌ಇನಲ್ಲಿ ಇಂದು ಬೆರಳೆಣಿಕೆಯ ಸಿಬ್ಬಂದಿ ಸೇವೆ ನಿರ್ವಹಿಸುತ್ತಾ ಬರುತ್ತಿದ್ದಾರೆ. ಖಾಸಗಿಕರಣದ ಕುರುಹೇನೋ ಎಂಬಂತೆ ಇಲ್ಲಿ ಹಾಲಿ ಸೇವೆ ನಿರ್ವಹಿಸುತ್ತಿರುವ ಹತ್ತಿಪ್ಪತ್ತು ಸಿಬ್ಬಂದಿ ಕೂಡ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ನುರಿತ ಕಾರ್ಮಿಕ ವರ್ಗ ಮಾಯವಾಗಿದೆ. ಅನನುಭವಿ ಸಿಬ್ಬಂದಿ ಕೈಗೆ ವಿದ್ಯುತ್ ಸ್ಥಾವರ ಒಳಪಟ್ಟಿದ್ದು, ಮುಂದೇನು ಕಾದಿದೆಯೋ ಏನೋ ಎಂಬ ಆತಂಕ ಇಲ್ಲಿನ ಮೂಲ ನಿವಾಸಿಗಳದ್ದಾಗಿದೆ.
ಮಹಾತ್ಮಗಾಂಧಿ ವಿದ್ಯುದಾಗಾರಕ್ಕೆ ನೀರು ಪೂರೈಸುವ ಪ್ರಮುಖ ಪವರ್ ಚಾನಲ್ ಕಾರ್ಗಲ್ ಚೈನಾಗೇಟಿನಿಂದ, ಶಿರೂರು ಕೆರೆಯವರೆಗೆ ನಿರ್ವಹಣೆ ಇಲ್ಲದೇ ಅಲ್ಲಲ್ಲಿ ಕುಸಿದು ಬೀಳುತ್ತಿದೆ. ಲಿಂಗನಮಕ್ಕಿ ಅಣೆಕಟ್ಟೆ ಪ್ರತಿವರ್ಷ ತುಂಬಿ ತುಳುಕುತ್ತಿದ್ದರೂ ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ನೀರಿನ ಬರವೇಕೆ? ಇಲ್ಲಿ ಸ್ಥಗಿತ ಗೊಂಡಿರುವ ವಿದ್ಯುತ್ ಘಟಕಗಳು ಯಾಕೆ ದುರಸ್ತಿ ಕಾಣುತ್ತಿಲ್ಲ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾಡು ಕಂಡ ಬಹು ಅಪರೂಪದ ಮಹಾತ್ಮಗಾಂಧಿ ವಿದ್ಯುದಾಗಾರ ಮುಚ್ಚುವ ದಿನಗಳು ದೂರವಿಲ್ಲ ಎಂಬ ಅನಿಸಿಕೆ ಸಾಮಾನ್ಯ ಜನರಲ್ಲಿ ಮೂಡ ತೊಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.