ADVERTISEMENT

ಹಸಿರೀಕರಣ ಯೋಜನೆ ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:52 IST
Last Updated 23 ಡಿಸೆಂಬರ್ 2017, 5:52 IST

ಹೊಸನಗರ: ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಹಸಿರೀಕರಣದಲ್ಲಿ ವ್ಯಾಪಕ ಅವ್ಯವಹಾರ ಆಗಿದೆ ಎಂದು ಸದಸ್ಯ ವೀರೇಶ ಆಲುವಳ್ಳಿ ದೂರಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಅರಸಾಳು ವಲಯದಲ್ಲಿ ಸಸಿಗಳನ್ನು ನಾಟಿ ಮಾಡದೇ ಹಣ ಪಡೆಯಲು ಬಿಲ್ ತಯಾರಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ಅವರು ಆಗ್ರಹಿಸಿದರು. ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ಕೆಲವು ಇಲಾಖೆಗಳ ಮುಖ್ಯಸ್ಥರು ಸತತವಾಗಿ ಗೈರು ಆಗುತ್ತಿದ್ದಾರೆ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ, ಕ್ರಮ ಜರುಗಿಸಲು ಸದಸ್ಯರು ಒತ್ತಾಯಿಸಿದರು.

ತಾಲ್ಲೂಕಿನಾದ್ಯಂತ ನದಿ ದಂಡೆಗಳಲ್ಲಿ ಸಾಕಷ್ಟು ಮರಳು ಇದ್ದರೂ ಜನಸಾಮಾನ್ಯರಿಗೆ, ಬಡವರಿಗೆ ದೊರಕುತ್ತಿಲ್ಲ. ಪೊಲೀಸ್, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸ್ವಂತಕ್ಕೆ ಮರಳು ಸಾಗಿಸಲು ಬಿಡುತ್ತಿಲ್ಲ. ಕಳ್ಳದಂಧೆಕೋರರ ಪಾಲಾಗುತ್ತಿದೆ ಎಂದು ಚಂದ್ರಮೌಳಿ, ಕಾಲ್ಸಸಿ ಸತೀಶ ಆರೋಪಿಸಿದರು.

ADVERTISEMENT

ಆಶ್ರಯ ಮನೆ, ಸ್ವಂತ ಮನೆ ದುರಸ್ತಿಗಳಿಗೆ ಸರಳವಾಗಿ ಮರಳೂ ದೊರಕುವಂತೆ ಆಗಬೇಕು ಈ ಕುರಿತು ಸಾಮಾನ್ಯ ಸಭೆಯು ನಿರ್ಣಯ ಅಂಗೀಕರಿಸಿ ಕಂದಾಯ ಸಚಿವ ಮೂಲಕ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಉಪಾಧ್ಯಕ್ಷೆ ಸುಶೀಲಮ್ಮ ಹಾಗೂ ಸದಸ್ಯರು ಇದ್ದರು. ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.