ADVERTISEMENT

ಹಿಂದೂ, ಮುಸ್ಲಿಂ ಸಹಬಾಳ್ವೆಗೆ ಧಕ್ಕೆ

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕಳವಳ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:45 IST
Last Updated 7 ಮೇ 2018, 13:45 IST

ಶಿವಮೊಗ್ಗ: ದೇಶದ ಸದ್ಯದ ಪರಿಸ್ಥಿತಿಯಲ್ಲಿ ಹಿಂದೂ, ಮುಸ್ಲಿಮರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕಳವಳ ವ್ಯಕ್ತಪಡಿಸಿದರು.

ಎನ್‌ಟಿ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಪರ ಮತಯಾಚಿಸಿ ಅವರು ಮಾತನಾಡಿದರು.

ಹಿಂದೆ ಹಿಂದೂ, ಮುಸ್ಲಿಮರು ಒಂದೇ ಓಣಿಯಲ್ಲಿ ಒಟ್ಟಿಗೆ ನೆಮ್ಮದಿಯಿಂದ ಬದುಕುತ್ತಿದ್ದರು. ಸಹೋದರರಂತೆ ಇರುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲದಂತೆ ಮಾಡಲಾಗಿದೆ. ಅಧಿಕಾರಕ್ಕಾಗಿ ಜಾತಿ, ಧರ್ಮದ ರಾಜಕೀಯ ಮಾಡಲಾಗುತ್ತಿದೆ. ಜನರ ನಡುವೆ ದೊಡ್ಡ ಕಂದಕ ನಿರ್ಮಿಸಲಾಗಿದೆ ಎಂದು ದೂರಿದರು.

ADVERTISEMENT

ಹಿಂದೂ, ಮುಸ್ಲಿಂ ಎಲ್ಲರೂ ಒಂದೇ. ಅವರ ಉಡುಗೆ, ಗಡ್ಡ, ನಾಮಗಳ ಆಧಾರದಲ್ಲಿ ವ್ಯತ್ಯಾಸ ಗುರುತಿಸಬಹುದು. ಈಗ ಅದರಲ್ಲೇ ಏನೋ ದೊಡ್ಡ ತೊಡಕು ಕಾಣುವಂತಾಗಿದೆ ಎಂದರು.

ಭಾರತ ಒಂದು ಅದ್ಭುತ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಸಿಖ್, ಮುಸ್ಲಿಂ ಸೇರಿದಂತೆ ಎಲ್ಲ ಜಾತಿಯ ಜನರು ಒಂದಾಗಿ ಬಾಳುತ್ತಿದ್ದಾರೆ. ಇಲ್ಲಿನ ಮಂದಿರ ಮಸೀದಿ, ಗುರುದ್ವಾರ, ಬೌದ್ಧ ಮಂದಿರಗಳು ಜನಾಕರ್ಷಣೆಯ ಕೇಂದ್ರಗಳು. ಇಂತಹ ಅಪೂರ್ವ ಸಂಸ್ಕೃತಿ, ಸೌಹಾರ್ದ ನೋಡಲು ವಿದೇಶದ ಜನರು ಬರುತ್ತಾರೆ. ಇಷ್ಟು  ಜಾತಿ, ಧರ್ಮ ಹೇಗೆ ಒಟ್ಟಿಗೆ ಇರಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಅಂತಹ ದೇಶ ಇಂದು ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದರು.

ನೆಹರೂ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ಪಿ.ಪಿ.ಸಿಂಗ್, ನರಸಿಂಗ ರಾವ್, ವಾಜಪೇಯಿ, ಮನಮೋಹನ್ ಸಿಂಗ್ ಮೊದಲಾದವರು ಈ ದೇಶ ಆಳಿದ್ದಾರೆ. ಎಂದೂ ದೇಶದ ನೆಮ್ಮದಿಗೆ ಧಕ್ಕೆಯಾಗಿಲ್ಲ. ಬಿಜೆಪಿ ಹಿಂದೆ 6 ವರ್ಷ ಆಳ್ವಿಕೆ ನಡೆಸಿದರೂ ಸಮಸ್ಯೆ ಎನಿಸಿರಲಿಲ್ಲ. ಈಗ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ಅಧಿಕಾರಕ್ಕಾಗಿ ಹೋರಾಟ ಅನಿವಾರ್ಯ. ಆದರೆ, ಯಾವುದನ್ನೂ ವೈಯಕ್ತಿಕ ಮಟ್ಟಕ್ಕೆ ಇಳಿಸಬಾರದು. ಕಾಂಗ್ರೆಸ್ ಹಲವು ದಶಕಗಳ  ಅಂತಹ ಹೋರಾಟ ನಡೆಸಿದೆ. ಸೋಲು, ಗೆಲುವು ಕಂಡಿದೆ. ಇಂದಿರಾ ಗಾಂಧಿ ಅಂಥವರೇ ಸೋಲು ಒಪ್ಪಿಕೊಂಡಿದ್ದಾರೆ. ಮತ್ತೆ ಪುಟಿದು ನಿಂತಿದ್ದಾರೆ. ಈಗಲೂ ಪಕ್ಷಕ್ಕೆ ಆ ಸಾಮರ್ಥ್ಯವಿದೆ. ಜನರು ಒಪ್ಪಿಕೊಳ್ಳುತ್ತಾರೆ.  ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ನೀಡುವುದಿಲ್ಲ ಎಂದು ವಿಶ್ಲೇಷಿಸಿದರು.

ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ‘20 ವರ್ಷ ಈ ಕ್ಷೇತ್ರದ ಶಾಸಕರಾಗಿದ್ದ ಈಶ್ವರಪ್ಪ ಅವರು ನಗರದ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ. ದೇಶದ ಉದ್ದಗಲಕ್ಕೂ ಆಸ್ತಿ ಮಾಡಿದ್ದು, ಹಣ ಎಣಿಸುವ ಯಂತ್ರ ಇಟ್ಟುಕೊಂಡಿರುವುದು ಅವರ ಸಾಧನೆ‘ ಎಂದು ವ್ಯಂಗ್ಯ ವಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ‘ಸೂಡಾ’ ಅಧ್ಯಕ್ಷ ಇಸ್ಮಾಯಿಲ್‌ ಖಾನ್, ಕೆಪಿಸಿಸಿ ಉಪಾಧ್ಯಕ್ಷ ಆಗ ಸುಲ್ತಾನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಇಂತಿಯಾಜ್ ಖಾನ್, ಎಚ್‌.ಸಿ. ಯೋಗೇಶ್ ಮಾತನಾಡಿದರು.

‘ಕಾಡಾ’ ಅಧ್ಯಕ್ಷ ಎಚ್‌.ಎಸ್. ಸುಂದರೇಶ್, ‘ಸೂಡಾ’ ಮಾಜಿ ಅಧ್ಯಕ್ಷರಾದ ಎನ್‌. ರಮೇಶ್, ಉಸ್ಮಾನ್ ಖಾನ್, ಪಾಲಿಕೆ ಸದಸ್ಯ ಪಂಡಿತ್ ವಿಶ್ವನಾಥ್, ನಾಗರಾಜ್, ಮಧುಸೂದನ್, ರಂಗನಾಥ್, ಆರೀಫ್‌ ಇದ್ದರು.

ಭಾಷಣ ಮೊಟಕು

ಮಧ್ಯಾಹ್ನ 2ರಿಂದ ಸಂಜೆ 6.30ರ ವರೆಗೆ ಬಹಿರಂಗ ಸಭೆಗೆ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿತ್ತು. ಆ ಗಡುವು ಮುಗಿಯುತ್ತಾ ಬಂದಿದ್ದರಿಂದ ಗುಲಾಂ ನಬಿ ಆಜಾದ್ ತಮ್ಮ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.