ADVERTISEMENT

ಹೆಗಲತ್ತಿ ಭೂ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 5:25 IST
Last Updated 4 ಡಿಸೆಂಬರ್ 2012, 5:25 IST

ತೀರ್ಥಹಳ್ಳಿ: ತಾಲ್ಲೂಕಿನ ಹೆಗಲತ್ತಿ ಗ್ರಾಮದ ಸರ್ವೇ ನಂ. 47ರಲ್ಲಿನ 162 ಎಕರೆ ಭೂ ಮಂಜೂರಾತಿಯ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಈ ಭೂಮಿ ಮಂಜೂರಾತಿಯಲ್ಲಿ ಯಾವುದೇ ಕಿಕ್‌ಬ್ಯಾಕ್ ಪಡೆದಿಲ್ಲ. ಈ ಕುರಿತು ನನ್ನ ವಿರುದ್ಧ ಮಾಡಿರುವ ಆರೋಪ ಕೇವಲ ರಾಜಕೀಯ ಪ್ರೇರಿತ. ಭೂನ್ಯಾಯ ಮಂಡಳಿಯಿಂದ ತಪ್ಪಾಗಿದ್ದರೆ ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಮದನ್ ತಮ್ಮ ವಿರುದ್ಧ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ನನ್ನ ಪ್ರಾಮಾಣಿಕತೆಯ ಬಗ್ಗೆ ಜನರಿಗೆ ತಿಳಿದಿದೆ. ಮದನ್ ಮಾಡಿರುವ ಆರೋಪಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ. ಅವರು ಆರೋಪಗಳಿಗೆ ಉತ್ತರಿಸದಿದ್ದರೆ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

ಶಾಸನ ಸಭೆಯಲ್ಲಿ ಹಣಕ್ಕಾಗಿ ಪ್ರಶ್ನೆ ಮಾಡುವ ಕೆಟ್ಟ ಮನಸ್ಸು ನನ್ನದಲ್ಲ. ನನ್ನ 30 ವರ್ಷದ ರಾಜಕೀಯ ಜೀವನ ಈಗ ರಾಜಕೀಯದ ಪ್ರವೇಶ ಪಡೆಯುತ್ತಿರುವ ಮಧು ಬಂಗಾರಪ್ಪ, ಮದನ್ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಬೆಂಬಲಿಸಿಕೊಂಡು ಬಂದ ಮದನ್ ಅವರದ್ದು ಯಾವ ಸಮಾಜವಾದಿ ನಿಲುವು ಎಂಬುದನ್ನು ಸ್ಪಷ್ಟಪಡಿಸಲಿ. ಈಡಿಗ ಸಮುದಾಯವನ್ನು ಎತ್ತಿಕಟ್ಟುವ ಸಲುವಾಗಿ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಮಸಲತ್ತು ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಸಂಚು ರೂಪಿಸುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದರು.

ಆರ್‌ಎಸ್‌ಎಸ್‌ಎಸ್‌ನ ಪ್ರಮುಖ ನಾಯಕರು ನನ್ನ ಪ್ರತಿ ಚುನಾವಣೆಯಲ್ಲಿ ಧನಸಹಾಯ ಮಾಡಿದ್ದಾರೆ. ಈಗಾಗಲೇ ಚುನಾವಣೆ ಎದುರಿಸಲು ರೂ. 8 ಲಕ್ಷ  ನೀಡಿದ್ದು, ಚುನಾವಣೆ ನಂತರ ವಾಪಸ್ ನೀಡುವಂತೆ ತಿಳಿಸಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಬಹಿರಂಗಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎಲ್. ಸುಂದರೇಶ್, ಪಟಮಕ್ಕಿ ರತ್ನಾಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.