ರಿಪ್ಪನ್‌ಪೇಟೆ: ಇಲ್ಲಿನ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾತೆ ಶ್ರೀಪದ್ಮಾವತಿ ಅಮ್ಮನವರ ಹಾಗೂ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮಹಾರಥೋತ್ಸವ ವಾರ್ಷಿಕ ಜಾತ್ರಾ ಕಾರ್ಯಕ್ರಮ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮಿಜಿ ಅವರ ನೇತೃತ್ವದಲ್ಲಿ ಶನಿವಾರ ಕುಂಕುಮೋತ್ಸವ ಹಾಗೂ ಧ್ವಜಾರೋಣದೊಂದಿಗೆ ತೆರೆ ಕಂಡಿತು.
ಬೆಳಿಗ್ಗೆ 8ಕ್ಕೆ ಧಾರ್ಮಿಕ ವಿಧಿ-ವಿಧಾನದಂತೆ ಸ್ವಾಮೀಜಿ ಅವರು ಕುಂಕುಮೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸ್ಥಳೀಯ ಯುವಕರು ಕಡಾಯಿಗಳಲ್ಲಿ ತುಂಬಿದ್ದ ಬಣ್ಣದ ನೀರಿನೋಕಳಿಯಾಟದಲ್ಲಿ ತೊಡಗಿದರು. ನಂತರ, ದೇವಿಯ ಉತ್ಸವಮೂರ್ತಿಯನ್ನು ಬಿಲ್ಲೇಶ್ವರದ ಈಶ್ವರ ದೇವಾಲಯದ ವರೆಗೆ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಯಿತು.
ನಂತರ ಕುಮದ್ವತಿ ಉಗಮ ಸ್ಥಾನದಲ್ಲಿ ದೇವಿಯನ್ನು ಶುದ್ಧೀಕರಿಸಿ ಊರಬಾಗಿಲ ಗಣಪತಿ ದೇವಸ್ಥಾನದ ವರೆಗೆ ಮೆರವಣಿಗೆಯಲ್ಲಿ ಬಂದ ಉತ್ಸವ ಮೂರ್ತಿಯನ್ನು ಅಲ್ಲಿಂದ ಮಠದ ಆವರಣದ ವರೆಗೆ ಅಂಬಾರಿಯಲ್ಲಿ ಕರೆತರಲಾಯಿತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾರ್ಚ್ 12ರಿಂದ 17ರವರೆಗೆ ಶ್ರೀ ಮಠದಲ್ಲಿ ಜರುಗಿದ ವಿವಿಧ ಧಾರ್ಮಿಕ ಕಾರ್ಯಕ್ರಮದ ಯಶಸ್ವಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು ಕಾರಣಕರ್ತರಾಗಿದ್ದರು.
ಅಭಿನಂದನೆ: ಶ್ರೀಕ್ಷೇತ್ರದಲ್ಲಿ ಕಳೆದ ಆರು ದಿನಗಳಿಂದ ನಡೆದ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಶಾಂತರೀತಿಯಿಂದ ಸಹಕರಿಸಿದ ಹಾಗೂ ಭಾಗವಹಿಸಿದ್ದ ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀಮಠದ ವತಿಯಿಂದ ಅಡಳಿತಾಧಿಕಾರಿ ಜಿ.ಜೆ. ಪದ್ಮನಾಭಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.