ADVERTISEMENT

‘ಅಡಿಕೆ: ಅಂತರ ಬೆಳೆಯಿಂದ ನಿರಂತರ ಆದಾಯ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:45 IST
Last Updated 26 ಸೆಪ್ಟೆಂಬರ್ 2013, 6:45 IST

ಶಿವಮೊಗ್ಗ: ರೈತರು ಏಕಬೆಳೆ ಪದ್ಧತಿಯನ್ನು ಬಿಟ್ಟು ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕೋಕೋ ಮತ್ತು ಬಾಳೆಯನ್ನು ಬೆಳೆಯವುದರಿಂದ ನಿರಂತರ ಆದಾಯ ಪಡೆಯಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ ತಿಳಿಸಿದರು.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಂಯುಕ್ತವಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಕೃಷಿ ತಂತ್ರಜ್ಞಾನ ಸಪ್ತಾಹದಲ್ಲಿ ಬುಧವಾರ ‘ಬಾಳೆ ಮತ್ತು ಕೋಕೋ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು’ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಯಾವುದೇ ಸಸಿಗಳನ್ನು ನಾಟಿ ಮಾಡುವ ಮುನ್ನ ಆರೋಗ್ಯವಂತ, ಕೀಟ ಮತ್ತು ರೋಗಗಳಿಂದ ಮುಕ್ತವಾದಂತಹ ಸಸಿಗಳನ್ನು ಆರಿಸಿ, ಎಕರೆಗೆ ಶಿಫಾರಸು ಮಾಡಿದ ಪ್ರಮಾಣದಂತೆ ನಾಟಿ ಮಾಡಿ, ರೋಗ ಮತ್ತು ಕೀಟ ನಿರ್ವಹಣೆಯನ್ನು ಸಮಗ್ರವಾಗಿ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ವಿನಾಕಾರಣ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಕೊಟ್ಟಿಗೆ ಗೊಬ್ಬರ, ಎರೆಹುಳುಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಹಾಕುವುದರಿಂದ ಭೂಮಿಯ ಫಲವತ್ತತೆಯನ್ನು ಕಾಪಾಡುವುದರೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿಕಾಂತ್, ಹೆಚ್ಚಿನ ಇಳುವರಿ ಪಡೆಯಲು ಹನಿ ನೀರಾವರಿ ಪದ್ಧತಿಯನ್ನು ಮತ್ತು ಯಾಂತ್ರೀಕೃತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರಗತಿಪರ ಕೃಷಿಕ ಸುಂದರೇಶ್, ಕೊಕೋ ಕೃಷಿಯಲ್ಲಿನ ತಮ್ಮ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. 

ಸಹಾಯಕ ತೋಟಗಾರಿಕಾ ಅಧಿಕಾರಿ ನಂದಾ ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಸಿ.ಹನುಮಂತಸ್ವಾಮಿ ಸ್ವಾಗತಿಸಿದರು. ಡಾ.ನಾಗರಾಜಪ್ಪ ಅಡಿವಪ್ಪರ್, ಕಾರ್ಯಕ್ರಮ ನಿರೂಪಿಸಿದರು. ಡಾ.ಆರ್.ನಾಗರಾಜ ವಂದಿಸಿದರು.
ಜಿಲ್ಲೆಯ 120ಕ್ಕೂ ಹೆಚ್ಚು ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.