ADVERTISEMENT

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:29 IST
Last Updated 9 ಜನವರಿ 2018, 5:29 IST

ಹೊಸನಗರ: ಖಾಸಗಿ ಶಾಲೆಗಳ ಪೈಪೋಟಿಗಳ ನಡುವೆಯೂ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದು ಆಶಾ ಭಾವನೆ ಮೂಡಿಸುತ್ತಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು. ಸೋಮವಾರ ತಾಲ್ಲೂಕಿನ ಯಡೂರು ಸರ್ಕಾರಿ ಪ್ರೌಢಶಾಲೆಯ ಮಂಜುನಾಥೇಶ್ವರ ಸುವರ್ಣ ಸಭಾಭವನ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಉದ್ಯಮ ಆಗುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮತ್ತ ಶಕ್ತಿ ಕೊಡುವ ಅಗತ್ಯ ಇದೆ. ಸರ್ಕಾರಿ ಶಾಲೆಯ ಮಕ್ಕಳು ಕೀಳರಿಮೆ ಬಿಡಬೇಕು. ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಜಾಗತಿಕ ಮಟ್ಟದ ಹೊಸ ಸವಾಲುಗಳನ್ನು ಎದುರಿಸಲು ಸಜ್ಜುಗೊಳ್ಳಬೇಕು ಎಂದರು.

ಶಾಸಕ ಕಿಮ್ಮನೆ ರತ್ನಾಕರ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಯಡೂರು ಸರ್ಕಾರಿ ಶಾಲೆಯು ಕಳೆದ ಬಾರಿ ಎಸ್ಸೆಸೆಲ್ಸಿಯಲ್ಲಿ ಶೇ 100 ಫಲಿತಾಂಶ ಪಡೆದಿದ್ದು, ಇದು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ’ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ ಸ್ವಾಮಿರಾವ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಸದಸ್ಯೆ ಶೋಭಾ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಪ್ಪ ಗೌಡ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಚಂದ್ರಪ್ಪ, ಸುಳಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಧರ, ಉಪಾಧ್ಯಕ್ಷೆ ಕಲಾವತಿ ಧರ್ಮರಾಜ್, ಯಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವೀಣಾ ಹೆಗಡೆ ಹಾಗೂ ಸದಸ್ಯರು, ಹಿರಿಯ ವಕೀಲ ಪ್ರಭಾಕರ ಜೋಯ್ಸ್, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಮೂರ್ತಿ ಗೌಡ ಹಾಜರಿದ್ದರು.

ಸುವರ್ಣಧಾರೆ ಸ್ಮರಣ ಸಂಚಿಕೆಯನ್ನು ಶಾಸಕ ಕಿಮ್ಮನೆ ರತ್ನಾಕರ ಬಿಡುಗಡೆ ಮಾಡಿದರು. ಬಿ.ಎಸ್.ಸಿಂಧು ತಂಡ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ಸುವರ್ಣ ಸಮಿತಿ ಅಧ್ಯಕ್ಷ ವೈ.ಭಾಸ್ಕರ ಜೋಯ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಹಾಗೂ ಷಣ್ಮುಖ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಕೇಶವ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.