ADVERTISEMENT

ಮೊಗಸಾಲೆ, ವಿ.ಗ.ನಾಯಕ, ರುದ್ರಮ್ಮಗೆ ‘ಪರಸ್ಪರ’ ಪ್ರಶಸ್ತಿ

ಶಿಶುನಾಳ ಷರೀಫ, ಕಿಟೆಲ್, ಅಕ್ಕಮಹಾದೇವಿ ಹೆಸರಿನಲ್ಲಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 4:06 IST
Last Updated 14 ಮಾರ್ಚ್ 2022, 4:06 IST
ಸಾಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ. ಮೊಗಸಾಲೆ ಅವರಿಗೆ ಸಂತ ಶಿಶುನಾಳ ಷರೀಫ, ಬರಹಗಾರ ವಿ.ಗ.ನಾಯಕ ಅವರಿಗೆ ರೆವರೆಂಡ್ ಎಫ್. ಕಿಟೆಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರುದ್ರಮ್ಮ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರುದ್ರಪ್ಪ ಅವರ ಪರವಾಗಿ ಉಪನ್ಯಾಸಕ ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿದರು.
ಸಾಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ. ಮೊಗಸಾಲೆ ಅವರಿಗೆ ಸಂತ ಶಿಶುನಾಳ ಷರೀಫ, ಬರಹಗಾರ ವಿ.ಗ.ನಾಯಕ ಅವರಿಗೆ ರೆವರೆಂಡ್ ಎಫ್. ಕಿಟೆಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರುದ್ರಮ್ಮ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರುದ್ರಪ್ಪ ಅವರ ಪರವಾಗಿ ಉಪನ್ಯಾಸಕ ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿದರು.   

ಸಾಗರ: ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆಯಿಂದ ವರದಶ್ರೀ ಹೋಟೆಲ್‌ನ ಮಲೆನಾಡು ಸಿರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ. ಮೊಗಸಾಲೆ ಅವರಿಗೆ ‘ಸಂತ ಶಿಶುನಾಳ ಷರೀಫ’, ಬರಹಗಾರ ವಿ.ಗ. ನಾಯಕ ಅವರಿಗೆ ರೆವರೆಂಡ್ ಎಫ್. ಕಿಟೆಲ್, ಸಾಮಾಜಿಕ ಕಾರ್ಯಕರ್ತೆ ರುದ್ರಮ್ಮ ಅವರಿಗೆ ‘ಅಕ್ಕಮಹಾದೇವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 5 ಸಾವಿರ ನಗದು ಪುರಸ್ಕಾರವನ್ನು ಒಳಗೊಂಡಿತ್ತು.

ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಿದ ಲೇಖಕ ಡಾ.ಜಿ.ಎಸ್.ಭಟ್, ‘ಪರಸ್ಪರ ಸಂಸ್ಥೆ ತನ್ನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದರ ಹಿಂದೆ ಸಮನ್ವಯತೆ, ಭಾವೈಕ್ಯದ ದೃಷ್ಟಿಕೋನವಿದೆ. ಈ ಕಾರಣಕ್ಕೆ ಪ್ರಶಸ್ತಿಯ ಮಹತ್ವ ಹೆಚ್ಚಿದೆ’ ಎಂದರು.

ADVERTISEMENT

‘ಬರಹಗಾರ ವಿ.ಗ. ನಾಯಕ ಅವರು ತಮ್ಮ ಸಂಶೋಧನಾ ಬರಹಗಳಲ್ಲಿ ಜನಾಂಗಿಕ ಅಧ್ಯಯನ ಮತ್ತು ಜಾತ್ಯತೀತಯನ್ನು ಸಮತೋಲನಗೊಳಿಸಿರುವುದು ವಿಶಿಷ್ಟ ಸಂಗತಿಯಾಗಿದೆ. ಕುವೆಂಪು ಅವರ ‘ಅನಿಕೇತನ ತತ್ವ’ದಲ್ಲಿ ನಂಬಿಕೆ ಇಟ್ಟ ವೈಚಾರಿಕ ಹಾಗೂ ಮಾನವೀಯ ವ್ಯಕ್ತಿತ್ವ ಅವರದ್ದು’ ಎಂದು ಹೇಳಿದರು.

‘ಡಾ.ನಾ.ಮೊಗಸಾಲೆ ಅವರು ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ದನೆಯ ಜೊತೆಗೆ ಆಯುರ್ವೇದ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರೋಚಕತೆ ಹಾಗೂ ತಾತ್ವಿಕತೆಯ ಸಮನ್ವಯ ಅವರ ಕಾದಂಬರಿಗಳಲ್ಲಿ ಎದ್ದು ಕಾಣುವ ಗುಣವಾಗಿದೆ’ ಎಂದು ವಿಶ್ಲೇಷಿಸಿದರು.

‘ವೀರಶೈವ ಕುಟುಂಬದಲ್ಲಿ ಜನಿಸಿದ ತರೀಕೆರೆ ತಾಲ್ಲೂಕಿನ ಕೊರಗನಹಳ್ಳಿ ಗ್ರಾಮದ ರುದ್ರಮ್ಮ ಮೂವರು ಮಕ್ಕಳನ್ನು ದತ್ತು ಪಡೆದು ತಮ್ಮ ಆಸ್ತಿಯನ್ನು ಅವರಿಗೆ ಹಸ್ತಾಂತರಿಸುವ ಮೂಲಕ ವಚನ ಚಳವಳಿಯ ನಿಲುವನ್ನು ಜಾರಿಗೆ ತಂದ ಅಪರೂಪದ ಮಹಿಳೆಯಾಗಿದ್ದಾರೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ನಾ.ಮೊಗಸಾಲೆ, ‘ಸರ್ಕಾರಕ್ಕೆ ಒಂದು ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇರಬೇಕು. ಅದು ಎಡ ಬಲಗಳ ನೆರಳಿನಿಂದ ಹೊರಬರಬೇಕು. ಭಾಷೆ, ಧ್ವನಿ, ಲಯ, ಸಂಕೇತ, ಪ್ರತಿಮೆಗಳ ಮೂಲಕ ಅರಿವನ್ನು ಹೆಚ್ಚಿಸಿ ಹೊಸ ‘ದರ್ಶನ’ಕ್ಕೆ ದಾರಿ ಮಾಡಿಕೊಟ್ಟ ಅಪರೂಪದ ಕವಿ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಧನ್ಯತೆಯ ಭಾವ ಮೂಡಿಸಿದೆ’ ಎಂದು ಹೇಳಿದರು.

ರುದ್ರಮ್ಮ ಅವರ ಪರವಾಗಿ ಉಪನ್ಯಾಸಕ ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿದರು. ಸಾಹಿತಿ ನಾ.ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ರಿಯಾ ಆಯೆಷಾ ಪ್ರಾರ್ಥಿಸಿದರು. ಗಣಪತಿ ಎಂ.ಎಸ್. ಸ್ವಾಗತಿಸಿದರು. ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಾತ್ರೇಯ ಬೊಂಗಾಳೆ ನಿರೂಪಿಸಿದರು. ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.