ADVERTISEMENT

ಅತಿಥಿ ಉಪನ್ಯಾಸಕರ ವಿಷಯದಲ್ಲಿ ಎಚ್‌ಡಿಕೆ ರಾಜಕಾರಣ; ಆಯನೂರು ಮಂಜುನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 13:06 IST
Last Updated 17 ಅಕ್ಟೋಬರ್ 2020, 13:06 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ಅತಿಥಿ ಉಪನ್ಯಾಸಕರ ವಿಷಯ ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದರು.

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಹೋರಾಟ ಮಾಡಿದ್ದು ನಾವು. ನಮ್ಮ ಪಕ್ಷದ ಎಲ್ಲ ಶಾಸಕರೂ ಇದಕ್ಕೆ ಬೆಂಬಲ ನೀಡಿದ್ದರು. ವಿಧಾನ ಪರಿಷತ್‌ನಲ್ಲೇ ಧ್ವನಿ ಎತ್ತಿದ್ದೆವು. ಇದರ ಪರಿಣಾಮ ಮುಖ್ಯಮಂತ್ರಿ ವೇತನ ಬಿಡುಗಡೆಯ ವಾಗ್ದಾನ ಮಾಡಿದ್ದರು. ಈಗ ಆರ್ಥಿಕ ಇಲಾಖೆಯ ಅನುಮೋದನೆಗೆ ಹೋಗಿವೆ. ₹ 87 ಕೋಟಿ ಬಿಡುಗಡೆಯಾಗಲಿದೆ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಗಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಈಗಾಗಲೇ ಅಡುಗೆ ಮಾಡಿದ್ದೇವೆ. ಅವರು ಬಡಿಸಲು ಬರುತ್ತಿದ್ದಾರೆ. ಇಂತಹ ಗೋಸುಂಬೆ ರಾಜಕಾರಣಿಯನ್ನು ಅತಿಥಿ ಉಪನ್ಯಾಸಕರು ನಂಬುತ್ತಾರೆಯೇ ಎಂದು ಕುಟುಕಿದರು.

ADVERTISEMENT

ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸರ್ಕಾರಿ ನೌಕರರ ಯಾವ ಸಮಸ್ಯೆಯನ್ನೂ ಬಗೆಹರಿಸಲಿಲ್ಲ. ಎನ್‌ಪಿಎಸ್ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಅತಿಥಿ ಉಪನ್ಯಾಸಕರ ನೆರವಿಗೆ ಬರಲಿಲ್ಲ. ವೇತನ ಹೆಚ್ಚಳ ಮಾಡಲಿಲ್ಲ. ಈಗ ರಾಜಕಾರಣ ಮಾಡಲು ಹೊರಟಿದ್ದಾರೆ. ಅತಿಥಿ ಉಪನ್ಯಾಸಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರು ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಜೆಡಿಎಸ್ ಸುಳ್ಳು ಮಾತುಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹೇಂದ್ರಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.