ADVERTISEMENT

ಶಿವಮೊಗ್ಗ ಜಿಲ್ಲೆಗೆ ಕೃಷಿ ಕ್ಲಸ್ಟರ್ ಸ್ಥಾನ; ಸಂಸದ ರಾಘವೇಂದ್ರ ಆಶಯ

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 13:31 IST
Last Updated 7 ಆಗಸ್ಟ್ 2021, 13:31 IST

ಶಿವಮೊಗ್ಗ: ಜಿಲ್ಲೆಗೆ ಕೃಷಿ ಕ್ಲಸ್ಟರ್ ಸ್ಥಾನ ದೊರಕಬೇಕು. ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ದೊರಕಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭದ್ರಾ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮರದ ಗೊಂಬೆ ತಯಾರಿಕೆಗೆಚನ್ನಪಟ್ಟಣ, ಬೆಂಗಳೂರು ಸಾಫ್ಟ್‌ವೇರ್ ಕ್ಲಸ್ಟರ್‌ಗಳಾಗಿವೆ. ಹೀಗೆ ಶಿವಮೊಗ್ಗ ಜಿಲ್ಲೆಯೂ ಕೃಷಿ ಕ್ಲಸ್ಟರ್ ಎಂದು ಹೆಮ್ಮೆಯಿಂದ ಹೇಳುವಂತಾಗಬೇಕು. ರೈತರು ಸ್ವಾಭಿಮಾನದಿಂದ ಬದುಕಲು ಅನುವಾಗಬೇಕು. ಜಲಾಶಯದ ನೀರು ಸದ್ಬಳಕೆಯಾಗಬೇಕು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರ, ಚಿತ್ರದುರ್ಗ, ಹಾವೇರಿ ಗದಗ, ವಿಜಯನಗರ ಸೇರಿ 8 ಜಿಲ್ಲೆಗಳಿಗೆ ಈ ಜಲಾಶಯ ಆಸರೆಯಾಗಿದೆ.ಸ್ವಾತಂತ್ರ್ಯ ನಂತರ ನಿರ್ಮಾಣ ಮಾಡಿದ ಭದ್ರಾ ಜಲಾಶಯ ಸುಮಾರು 2 ಲಕ್ಷ ಹೆಕ್ಟೇರ್‌ಗೆ ನೀರುಣಿಸುತ್ತಿದೆ. ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗದಂತೆ ಸೂಕ್ತ ನಿರ್ವಹಣೆ ಮಾಡಬೇಕು ಎಂದರು.

ADVERTISEMENT

ಪ್ರಕೃತಿ ವಿರುದ್ಧ ಮನಷ್ಯನ ದರ್ಪ, ವಿನಾಶಕಾರಿ ಪ್ರವೃತ್ತಿಗೆ ಪ್ರಕೃತಿ ತಕ್ಕ ಪಾಠ ಕಲಿಸಿದೆ. ಪ್ರಾಕೃತಿಕ ವಿಕೋಪಗಳ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಸಾಕಷ್ಟು ಎಚ್ಚರಿಕೆಯಿಂದ ಪ್ರಕೃತಿ ಜತೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಎರಡು ವರ್ಷಗಳಲ್ಲಿ ಜಿಲ್ಲೆಗೆ ₹ 3 ಸಾವಿರ ಕೋಟಿ ಅನುದಾನ ನೀಡಿದೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ₹ 350 ಕೋಟಿ ಅನುದಾನದಲ್ಲಿ ಹೊಸಹಳ್ಳಿ ಏತ ನೀರಾವರಿ, ಸೊರಬ ತಾಲ್ಲೂಕಿನ ಮೂಗೂರು, ಮೂಡಿ ಏತ ನೀರಾವರಿ, ಶಿಕಾರಿಪುರ ತಾಲ್ಲೂಕಿನ ಉಡುಗಣಿ ತಾಳಗುಂದ ಹೊಸೂರು ಹೋಬಳಿ, ಬೈಂದೂರು ಕ್ಷೇತ್ರದ ಸಿದ್ದಾಪುರ ನೀರಾವರಿ ಯೋಜನೆ ಕಾಮಗಾರಿ ಕೈಗೊಳ್ಳಲಾಗಿದೆ. ರೈತ ಸಮುದಾಯ ಭವನಗಳ ನಿರ್ಮಾಣ, ರಸ್ತೆ ಕಾಮಗಾರಿ, ಅಚ್ಚುಕಟ್ಟು ಪ್ರದೇಶದ ಕೆರೆಗಳಲ್ಲಿ ಹೂಳು ತೆಗೆಯುವುದು, ನಾಲೆಗಳ ದುರಸ್ತಿ ಸೇರಿದಂತೆ ಹಲವು ಕೆಲಸಗಳು ಆಗುತ್ತಿವೆ. ಬಯಲುಸೀಮೆಗೆ 29 ಟಿಎಂಸಿ ಅಡಿ ನೀರು ಹರಿಸಲು ಭದ್ರಾ ಮೇಲ್ದಂಡೆ ಯೊಜನೆ ಅನುಷ್ಠಾನವಾಗುತ್ತಿದೆ ಎಂದರು.

ಭದ್ರಾ ಕಾಮಗಾರಿ ಕಳಪೆಯಾಗಿವೆ ಎಂದು ಕೆಲವು ಸಂಘಟನೆಗಳು ದೂರಿವೆ. ಕಳಪೆಗೆ ಅವಕಾಶ ನೀಡಬಾರದು. ಗುಣಮಟ್ಟಕ್ಕೆ ಒತ್ತು ನೀಡಬೇಕು. ತಪ್ಪುಗಳಾಗಿದ್ದರೆ ತಿದ್ದಿಕೊಂಡು ದುರಸ್ತಿ ಮೂಲಕ ಸರಿಪಡಿಸಬೇಕು. ಕೋವಿಡ್‌ ಸಂಕಷ್ಟದ ಕಾರಣ ಕೃಷಿ ಕ್ಷೇತ್ರಕ್ಕೆ ಹಚ್ಚಿನ ಅನುದಾನ ನೀಡಲು ಸಾಧ್ಯವಾಗಿಲ್ಲ. ಮುಂದೆ ಮತ್ತೆ ಹೆಚ್ಚಿನ ನೆರವು ದೊರಕಲಿದೆ.ಇರುವ ಅನುದಾನದಲ್ಲೇ ‘ಕಾಡಾ’ ಅಧ್ಯಕ್ಷರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ₹ 50 ಕೋಟಿ ಅನುದಾನ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಯೋಜನೆಯ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಕೊಡಬೇಕು. ರೈತರು, ಅಧಿಕಾರಿಗಳ ಮಧ್ಯದ ಕಂದಕದಿಂದ ಇದು ಸಾಧ್ಯವಾಗಿಲ್ಲ. ರೈತರು ಮತ್ತು ಅಧಿಕಾರಿಗಳನ್ನು ಸೇರಿಸುವ ಕೆಲಸ ಮಾಡುತ್ತಿರುವೆ. ಭದ್ರಾ ಮೇಲ್ದಂಡೆಗೆ ನೀರು ಕೊಡಲು ಪ್ರಾಧಿಕಾರದ ವಿರೋಧವಿಲ್ಲ. ಆದರೆ, ಜಲಾಶಯದ ಪರಿಸ್ಥಿತಿ ಅರಿಯಬೇಕು. 29 ಟಿಎಂಸಿ ನೀರನ್ನೂ ತುಂಗಾದಿಂದಲೇ ಲಿಫ್ಟ್ ಮಾಡಿದರೆ ಅನುಕೂಲವಾಗುತ್ತದೆ ಎಂದು ವಿನಂತಿಸಿದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ ಭಟ್‌, ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ತಾಯಿ ಸ್ಥಾನವಿದೆ. ಬಾಗಿನ ಅರ್ಪಿಸುವ ಮೂಲಕ ತಾಯಿಗೆ ಭಕ್ತಿಪೂರ್ವಕವಾಗಿ ನಮಿಸಲಾಗುತ್ತಿದೆ. ಸಾಮಾನ್ಯವಾಗಿ ಆಗಸ್ಟ್ ಕೊನೆಗೆ ಭದ್ರಾ ಜಲಾಶಯ ಭರ್ತಿಯಾಗುತ್ತಿತ್ತು. ಈ ವರ್ಷ ಬೇಗನೆ ತುಂಬಿರುವುದುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ ಎಂದರು.

ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಎಸ್‌.ದತ್ತಾತ್ರಿ, ‘ಸೂಡಾ’ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರ ಕಾಡಾ ಸದಸ್ಯರಾದ ನಾಗಸಮುದ್ರದ ಷಡಕ್ಷರಪ್ಪ, ಕೆಎಸ್.ರುದ್ರಮೂರ್ತಿ, ಹರಿಹರದ ರಾಜಪ್ಪ, ಹೊನ್ನಾಳಿಯ ಹನುಮಂತಪ್ಪ, ಶಿಕಾರಿಪುರದ ಮಂಜುನಾಥ್, ವಿನಾಯಕ್, ಪ್ರಾಧಿಕಾರದ ಆಡಳಿತಾಧಿಕಾರಿ ಪ್ರಸಾದ್, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜನಿಯರ್ ಶಿವಾನಂದ ಬಣಕಾರ್, ಜಲಾಶಯದ ಎಂಜಿನಿಯರ್ ಚಂದ್ರಹಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.