ಶಿವಮೊಗ್ಗ: ‘ಮಾಜಿ ಪ್ರಧಾನಿ ಇಂದಿರಾಗಾಂಧಿ 1975ರಲ್ಲಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯಿಂದ ಮಧ್ಯರಾತ್ರಿ ಪಡೆದಿದ್ದ ಸ್ವಾತಂತ್ರ್ಯ ಹರಣವಾಗಿತ್ತು. ಆ ಕರಾಳ ದಿನಕ್ಕೆ 50 ವರ್ಷ ತುಂಬಿದೆ’ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾಂಗ್ರೆಸ್ ವಿರುದ್ಧದ ‘ಕರಾಳ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘1971ರಲ್ಲಿ ಕಾಂಗ್ರೆಸ್‌ನ ‘ಗರೀಬಿ ಹಠಾವೋ’ ಘೋಷಣೆಗೆ ಜನ ಮಾರು ಹೋಗಿದ್ದರು. ಈಗ ಗ್ಯಾರಂಟಿ ಯೋಜನೆಗಳಿಗೆ ಮಾರು ಹೋಗಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದ ಇಂದಿರಾ ಗಾಂಧಿ, ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಮೂಲಕ ಬಲವಂತವಾಗಿ ತುರ್ತುಪರಿಸ್ಥಿತಿ ಘೋಷಣೆ ಮಾಡಿಸಿದ್ದರು. ವಿರೋಧ ಪಕ್ಷಗಳ ನೂರಾರು ನಾಯಕರನ್ನು ಬಂಧನದಲ್ಲಿ ಇಡಲಾಗಿತ್ತು. ಇದು ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯ’ ಎಂದರು.
‘ಆಗ ದೇಶದ ಜನ ಪಡಬಾರದ ಕಷ್ಟಪಟ್ಟರು. ಆ ಅವಧಿಯಲ್ಲಿ ಕುಟುಂಬ ಆಡಳಿತ ಇತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯ ದಮನ, ಮಾನವ ಹಕ್ಕುಗಳ ಉಲ್ಲಂಘನೆ, ಹಿರಿಯರು ಕಿರಿಯರು ಎನ್ನದೇ ಸಿಕ್ಕಸಿಕ್ಕವರಿಗೆ ಜೈಲುವಾಸ, ನಿರಂಕುಶ ಅಧಿಕಾರ, ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗಿತ್ತು. ಈ ವೇಳೆ ಆರ್‌ಎಸ್‌ಎಸ್‌ಗೆ ನಿಷೇಧ ಹೇರಲಾಗಿತ್ತು’ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಘಟಕದ ಅಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ಡಾ.ಶಿವಯೋಗಿ, ಎಸ್.ದತ್ತಾತ್ರಿ, ಗಿರೀಶ್ ಪಟೇಲ್, ಎಸ್.ಜ್ಞಾನೇಶ್, ಸಿಂಗನಹಳ್ಳಿ ಸುರೇಶ್, ಜಯರಾಂ, ಮಾಲತೇಶ್ ರಮೇಶ್ (ರಾಮು), ಕೆ.ವಿ.ಅಣ್ಣಪ್ಪ ಇದ್ದರು.
ತುರ್ತು ಪರಿಸ್ಥಿತಿ ಸಂದರ್ಭದ ಕರಾಳ ದಿನಗಳ ಸತ್ಯ ಸಮಾಜಕ್ಕೆ ತಿಳಿಯಬೇಕು. ಆದ್ದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.– ಎನ್.ಕೆ.ಜಗದೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.