ADVERTISEMENT

‘ಕುಮಾರ್ ಬಂಗಾರಪ್ಪ ವಿರುದ್ಧ ಟೀಕೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:05 IST
Last Updated 26 ಸೆಪ್ಟೆಂಬರ್ 2021, 4:05 IST
ಸೊರಬದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಬಗರ್‌ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ ಮಾತನಾಡಿದರು
ಸೊರಬದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಬಗರ್‌ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ ಮಾತನಾಡಿದರು   

ಸೊರಬ: ‘ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ರಾಜಕೀಯ ಅಪ್ರಬುದ್ಧತೆ ಇದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ದ್ವಾರಳ್ಳಿ ಹೇಡಿತನದ ರಾಜಕಾರಣಕ್ಕೆ ಮುಂದಾಗಿದ್ದಾರೆ’ ಎಂದು ಬಗರ್‌ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ ದೂರಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ದ್ವಾರಳ್ಳಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವ ಬಗ್ಗೆ ಅರಿವಿಲ್ಲದೇ ಆಡಳಿತ ಪಕ್ಷದ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಬಣ ರಾಜಕೀಯದ ಸೃಷ್ಟಿಗೆ ಕಾರಣರಾಗಿದ್ದಾರೆ. ಕುಮಾರ್ ಬಂಗಾರಪ್ಪ ಶಾಸಕರಾಗಿರುವುದು ಬಿಜೆಪಿ ಚಿಹ್ನೆಯಡಿಯಲ್ಲಿ ಹೊರತು ಯಾವುದೇ ಒಂದು ಸಮುದಾಯದ ಬಲದಿಂದಲ್ಲ. ಗುರುಪ್ರಸನ್ನಗೌಡ ಹಾಗೂ ಮಲ್ಲಿಕಾರ್ಜುನ ದ್ವಾರಳ್ಳಿ ಶಾಸಕರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡಲಿದ್ದಾರೆ’ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಕಡಸೂರು ಮಾತನಾಡಿ, ‘ಮಲ್ಲಿಕಾರ್ಜುನ ದ್ವಾರಳ್ಳಿ ಅವರಿಗೆ ವೀರಶೈವ ಸಮುದಾಯದ ಬೆಂಬಲವಿದೆ ಎಂದ ಮಾತ್ರಕ್ಕೆ ಬಂಗಾರಪ್ಪ ಕುಟುಂಬದ ವಿರುದ್ಧವಾಗಿ ಕೀಳುಮಟ್ಟದ ಭಾಷೆ ಬಳಸಿ ಮಾತನಾಡುವುದು ಸರಿಯಲ್ಲ. ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಅರಗಿಸಿಕೊಳ್ಳಲಾಗದೇ ಪಕ್ಷಕ್ಕೆ ಮುಜುಗರ ತರುವಂತಹ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಬಸವಲಿಂಗಪ್ಪ ಮಾತನಾಡಿ, ‘ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ಟೀಕಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಇಂತಹವರಿಂದ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ರಾಜಕೀಯ ಸಲಹೆ, ಸೂಚನೆ ಬೇಕಾಗಿಲ್ಲ. ಜನರ ಮಧ್ಯೆ ಹೇಗೆ ಬದುಕಬೇಕು ಎನ್ನುವುದನ್ನು ಮೊದಲು ಕಲಿಯಬೇಕು. ಬಂಗಾರಪ್ಪ ಕುಟುಂಬದ ವಿರುದ್ಧವಾಗಿ ಪದೇಪದೇ ನಾಲಿಗೆ ಹರಿಬಿಟ್ಟರೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಭೆಗೂ ಮುನ್ನ ಜನಸಂಘದ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನ ಆಚರಿಸಲಾಯಿತು.

ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ,‌ಪ್ರಕಾಶ್ ಅಗನಸಹಳ್ಳಿ, ಶಿವನಗೌಡ, ಕನಕದಾಸ ಕಲ್ಲಂಬಿ, ಅಶೋಕ, ಮಂಜಪ್ಪ, ವಸುಂಧುರಾ ಭಟ್, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.