ADVERTISEMENT

ಸೊರಬ ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಡಿಸಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 1:51 IST
Last Updated 19 ಆಗಸ್ಟ್ 2021, 1:51 IST
ಸೊರಬ ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಲು ಒತ್ತಾಯಿಸಿ ಪುರಸಭೆ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಸೊರಬ ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಲು ಒತ್ತಾಯಿಸಿ ಪುರಸಭೆ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಸೊರಬ: ಇಲ್ಲಿನ ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಲು ಒತ್ತಾಯಿಸಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್ ಅವರು ಸದಸ್ಯರ ಯಾವುದೇ ಸಲಹೆ, ಸಹಕಾರ ತೆಗೆದುಕೊಳ್ಳದೆ ಸರ್ವಾಧಿಕಾರಿಯಾಗಿ, ಅಗೌರವದಿಂದ ಅಧಿಕಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ಆಡಳಿತ ವೈಖರಿ ಸದಸ್ಯರಿಗೆ ಇಷ್ಟವಾಗದ ಕಾರಣ ಹಾಗೂ ಅವರು ಆಡಳಿತ ನಡೆಸುವುದರಲ್ಲಿ ವಿಫಲರಾದ ಕಾರಣ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಬೇಕು’ ಎಂದು ಪುರಸಭೆಯ 10 ಜನ ಸದಸ್ಯರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಒಟ್ಟು 12 ಸದಸ್ಯರಿರುವ ಪುರಸಭೆಯಲ್ಲಿ 6 ಜನ ಬಿಜೆಪಿ, ನಾಲ್ವರು ಕಾಂಗ್ರೆಸ್, ಒಬ್ಬರು ಜೆಡಿಎಸ್, ಒಬ್ಬರು ಪಕ್ಷೇತರರಿದ್ದಾರೆ.‌ ಇದರಲ್ಲಿ ಬಿಜೆಪಿ ಬೆಂಬಲಿತ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ಬಿಜೆಪಿ ಬೆಂಬಲಿತ ಅಧ್ಯಕ್ಷ ಎಂ.ಡಿ.ಉಮೇಶ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿ ಮನವಿ ಸಲ್ಲಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು ಸಾಗರದಉಪ ವಿಭಾಗಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸದಸ್ಯರಾದ ಆಫ್ರಿನ್ ಮೆಹಬೂಬ್ ಬಾಷಾ, ಈರೇಶಪ್ಪ, ಜಯಲಕ್ಷ್ಮೀ ಪರಮೇಶಿ, ಪ್ರೇಮಾ ಟೋಕಪ್ಪ, ಯು.ನಟರಾಜ್, ಡಿ.ಎಸ್.ಪ್ರಸನ್ನಕುಮಾರ್, ಅನ್ಸರ್ ಅಹ್ಮದ್, ಸುಲ್ತಾನ ಬೇಗಂ ಸಿರಾಜುದ್ದೀನ್, ಶ್ರೀರಂಜನಿ ಪ್ರವೀಣ್ ಕುಮಾರ್, ಪ್ರಭು ಮೆಸ್ತ್ರಿ ಒಕ್ಕೊರಲಿನಿಂದ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.