ADVERTISEMENT

ಶಿವಮೊಗ್ಗ: ಪಾನ್‌ಮಸಾಲಾ ನಿಷೇಧಕ್ಕೆ ರೈತ ಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 15:47 IST
Last Updated 14 ಅಕ್ಟೋಬರ್ 2020, 15:47 IST
ಎಚ್‌.ಆರ್. ಬಸವರಾಜಪ್ಪ 
ಎಚ್‌.ಆರ್. ಬಸವರಾಜಪ್ಪ    

ಶಿವಮೊಗ್ಗ: ಪಾನ್‌ಮಸಾಲಾ ನಿಷೇಧಿಸುವ ಸರ್ಕಾರವನ್ನು ಕ್ರಮವನ್ನು ರಾಜ್ಯ ರೈತ ಸಂಘ ಖಂಡಿಸಿದೆ.

ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಪಾನ್‍ಮಸಾಲಾ ನಿಷೇಧ ಮಾಡಲು ಮುಂದಾಗಿರುವುದು ಅಡಿಕೆ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಡಿಕೆ ಬೆಳೆಗಾರರು ಸಂಪೂರ್ಣ ಬೀದಿಗೆ ಬರುತ್ತಾರೆ. ಸರ್ಕಾರ ಪಾನ್‌ಮಸಾಲಾ ನಿಷೇಧ ಪ್ರಸ್ತಾಪವನ್ನು ಕೈಬಿಡಬೇಕು ಎಂದು ರೈತ ಸಂಘ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಅಡಿಕೆ ಬೆಳೆಗಾರರಿದ್ದಾರೆ. ಅಡಿಕೆ ಉದ್ಯಮ ಬಹುದೊಡ್ಡದಾಗಿದೆ. ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸ್ಥಿತಿಯಲ್ಲಿದೆ. ಈ ಉದ್ಯಮಕ್ಕೆ ಸಂಬಂಧಿಸಿದಂತೆ ಕೇವಲ ಬೆಳೆಗಾರರು ಮಾತ್ರವಲ್ಲದೇ ಕಾರ್ಮಿಕರು, ಮಂಡಿ ಕಾರ್ಮಿಕರು, ಹಮಾಲರು, ಕೈಗಾಡಿಯವರು, ಲಾರಿ ಮತ್ತು ಉದ್ಯಮ ಕ್ಷೇತ್ರ ಎಲ್ಲವೂ ಅವಲಂಬಿತವಾಗಿವೆ. ನಿಷೇಧದಿಂದ ಇವರೆಲ್ಲರ ಬದುಕು ಬೀದಿಗೆ ಬೀಳಲಿದೆ ಎಂದು ಆರೋಪಿಸಿದರು.

ADVERTISEMENT

ಪಾನ್‍ಮಸಾಲಾ ಪ್ಯಾಕೇಟ್‍ನಲ್ಲಿ ಡ್ರಗ್ಸ್ ಸೇರಿಸಿ ಮಾರಾಟ ಮಾಡುತ್ತಾರೆ ಎಂಬ ನೆಪ ಇಟ್ಟುಕೊಂಡು ಪಾನ್‌ಮಸಾಲಾ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಕೇವಲ ₹ 5ಗೆ ಮಾರಾಟ ಮಾಡುವ ಪಾನ್‌ಮಸಾಲಾದಲ್ಲಿ ದುಬಾರಿ ಬೆಲೆಯ ಡ್ರಗ್ಸ್ ಸೇರಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಭಾರತೀಯ ಸಂಸ್ಕೃಂತಿಯಲ್ಲಿ ಅಡಿಕೆಗೆ ಪೂಜ್ಯ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣ ಇದೆ. ಶುಭ ಸಮಾರಂಭಗಳಲ್ಲಿ ಅಡಿಕೆ ಬಳಸಲಾಗುತ್ತದೆ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸಿಗರೇಟ್ ಕಂಪೆನಿಗಳು ಲಾಬಿ ನಡೆಸಿ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ ಎಂದು ದೂರಿದರು.

ಅಡಿಕೆ ಬೆಳೆಗಾರರ, ಕಾರ್ಮಿಕರ ಹಿತದೃಷ್ಟಿಯಿಂದ ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಅಡಿಕೆ ಬೆಳೆಗಾರರ ಪ್ರದೇಶದ ಎಲ್ಲ ಶಾಸಕರು ಒಟ್ಟಾಗಿ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿ ಪಾನ್‌ಮಸಾಲಾ ನಿಷೇಧ ಪ್ರಸ್ತಾಪವನ್ನು ಕೈಬಿಡುವಂತೆ ಎಂದು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶಿವಮೂರ್ತಿ, ಹಿಟ್ಟೂರು ರಾಜು, ಜಗದೀಶ್, ಪಿ.ಡಿ. ಮಂಜಪ್ಪ, ಜ್ಞಾನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.