ADVERTISEMENT

ಗೋಪಾಲಗೌಡರ ಮೌಲ್ಯಗಳು ಅವಶ್ಯಕ

‘ಶಾಂತವೇರಿ ಗೋಪಾಲಗೌಡ ಜೀವನ ಚರಿತ್ರೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಣ್ಯರ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 15:52 IST
Last Updated 20 ಜನವರಿ 2019, 15:52 IST
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಭಾನುವಾರ ಡಾ.ನಟರಾಜ್ ಹುಳಿಯಾರ್ ರಚಿಸಿರುವ ‘ಶಾಂತವೇರಿ ಗೋಪಾಲಗೌಡ ಜೀವನ ಚರಿತ್ರೆ’ ಪುಸ್ತಕವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆಗೊಳಿಸಿದರು.
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಭಾನುವಾರ ಡಾ.ನಟರಾಜ್ ಹುಳಿಯಾರ್ ರಚಿಸಿರುವ ‘ಶಾಂತವೇರಿ ಗೋಪಾಲಗೌಡ ಜೀವನ ಚರಿತ್ರೆ’ ಪುಸ್ತಕವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆಗೊಳಿಸಿದರು.   

ಶಿವಮೊಗ್ಗ: ರಾಜಕಾರಣ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಜೀವನ ತತ್ವ, ಮೌಲ್ಯಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದಲ್ಲಿ ಡಾ. ನಟರಾಜ್ ಹುಳಿಯಾರ್ ರಚಿಸಿರುವ ‘ಶಾಂತವೇರಿ ಗೋಪಾಲಗೌಡ ಜೀವನ ಚರಿತ್ರೆ’ ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

‘ತಮ್ಮ ಎಲ್ಲಾ ಹೋರಾಟಗಳಿಗೆ ಶಾಂತವೇರಿ ಗೋಪಾಲಗೌಡರ ಪ್ರೇರಣೆಯಿದೆ. ಅವರು ಇಟ್ಟ ಹಾದಿಯಲ್ಲಿ ನಡೆದ ಕಾರಣದಿಂದಲೇ ಸಮಾಜದಲ್ಲಿ ನ್ಯಾಯ ದೊರಕಿಸಿಕೊಡಲು ಸಾಧ್ಯವಾಯಿತು. ಇಂತಹ ವ್ಯಕ್ತಿಯನ್ನು ಇಂದಿನ ಸಮಾಜ ನೆನೆಸಿಕೊಳ್ಳುವುದು ಅತ್ಯವಶ್ಯಕ. ಅವರ ಬದುಕು ಅನೇಕರಿಗೆ ಪ್ರೇರಣೆಯಾಗಲಿ’ ಎಂದು ಆಶಿಸಿದರು.

ADVERTISEMENT

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ‘ಕುವೆಂಪು ಹಾದಿಯಾಗಿ ಈ ನಾಡಿನ ಖ್ಯಾತನಾಮ ಲೇಖಕರು ಶಾಂತವೇರಿ ಗೋಪಾಲಗೌಡರ ಬದುಕು, ವ್ಯಕ್ತಿತ್ವದ ಬಗ್ಗೆ ಲೇಖನ, ಪದ್ಯ ಬರೆದಿದ್ದಾರೆ. ಅವರ ಹೋರಾಟದ ಜೀವನವೇ ಪ್ರತಿಯೊಬ್ಬರಿಗೂ ಮಾದರಿ. ಅವರ ವ್ಯಕ್ತಿತ್ವ ಯುವಜನಾಂಗಕ್ಕೆ ಹೊಸ ದಾರಿ ತೋರಿಸುತ್ತದೆ. ಅಧಿಕಾರ, ಮಂತ್ರಿ ಪದವಿಗಾಗಿ ಕಿತ್ತಾಡುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರು ನಮಗೆ ಮತ್ತೆ, ಮತ್ತೆ ನೆನಪಾಗುತ್ತಾರೆ’ ಎಂದರು.

ಕೃತಿಕಾರರು ಓದುಗರ ಮನಸ್ಸು ಮತ್ತು ಹೃದಯವನ್ನು ಬೆಸೆಯುವ ಕೆಲಸವನ್ನು ಕೃತಿಯ ಮೂಲಕ ಮಾಡಿದ್ದಾರೆ. ಜನರ ಹೃದಯಕ್ಕೆ ಹತ್ತಿರವಾಗುವ ವಿಚಾರಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಪುಸ್ತಕವನ್ನು ಯುವಜನಾಂಗ ಓದಬೇಕು ಎಂದು ಸಲಹೆ ನೀಡಿದರು.

ಕೃತಿಕಾರ ಡಾ.ನಟರಾಜ್ ಹುಳಿಯಾರ್, ‘ಗೋಪಾಲಗೌಡರು ನೆನಪು ಮಾತ್ರ ಶಾಶ್ವತವಲ್ಲ. ಅವರು ಎತ್ತಿದ ಪ್ರಶ್ನೆಗಳು ನಿರಂತರವಾಗಿವೆ. ಅವರು ಏಕಕಾಲದಲ್ಲಿ ನವೋದಯದಿಂದ ಪ್ರೇರಣೆ ಪಡೆದು ಪ್ರಗತಿಶೀಲ ಕಾಲಘಟ್ಟದ ಒಡನಾಟ ಹೊಂದಿದ್ದರು. ಒಂದು ನೋಟು, ಒಂದು ವೋಟು ತತ್ವವನ್ನು ಹುಟ್ಟು ಹಾಕಿದ ಮತ್ತು ಜನರಿಂದಲೇ ರೂಪಿತವಾದ ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಂಡಿದ್ದ ಗೋಪಾಲಗೌಡರ ಎಳೆ ನಮ್ಮಲ್ಲಿ ಉಳಿಯದಿದ್ದರೇ ಈ ಸಮಾಜ ಮತ್ತಷ್ಟು ದುರಂತ ಎದುರಿಸುವುದರಲ್ಲಿ ಅನುಮಾನವಿಲ್ಲ’ ಎಂದರು.

ಲೇಖಕ ಬಿ. ಚಂದ್ರೇಗೌಡ ನಿರೂಪಿಸಿದರು. ಗೋಪಾಲಗೌಡರ ಒಡನಾಡಿಗಳು, ಕುಟುಂಬಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.