ADVERTISEMENT

ಶಿವಮೊಗ್ಗ: ಎಡ, ಬಲ ಏನೇ ಇರಲಿ, ಸಮಸ್ಯೆಗಳತ್ತ ಚಿತ್ತ ಹರಿಯಲಿ

ಸಂವಾದದಲ್ಲಿ ‘ಪ್ರಜಾವಾಣಿ’ ಸಹಾಯಕ ಸಂಪಾದಕ ಬಿ.ಎಂ. ಹನೀಫ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:32 IST
Last Updated 9 ಅಕ್ಟೋಬರ್ 2021, 6:32 IST
ಶಿವಮೊಗ್ಗದಲ್ಲಿ ಶುಕ್ರವಾರ ಕಾರ್ಯನಿರ್ತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಪತ್ರಕರ್ತ ನ.ರಾ.ವೆಂಕಟೇಶ್ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಕಾರ್ಯನಿರ್ತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಪತ್ರಕರ್ತ ನ.ರಾ.ವೆಂಕಟೇಶ್ ಉದ್ಘಾಟಿಸಿದರು.   

ಶಿವಮೊಗ್ಗ: ಎಡ, ಬಲ ಪಂಥಗಳು, ಸಿದ್ಧಾಂತಗಳು ಏನೇ ಇರಲಿ ಜನರ ಸಮಸ್ಯೆಗಳತ್ತ ಪತ್ರಿಕೋದ್ಯಮದ ಚಿತ್ತ ಹರಿಯಬೇಕು. ಪತ್ರಕರ್ತರಾದವರು ತಮ್ಮ ವೈಯಕ್ತಿಕ ಆಲೋಚನೆಗಳನ್ನು ಪತ್ರಿಕೆಯ ಮೇಲೆ ಹೇರಬಾರದು ಎಂದು ‘ಪ್ರಜಾವಾಣಿ’ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಪ್ರತಿಪಾದಿಸಿದರು.

ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹಳಷ್ಟು ಮಾಧ್ಯಮಗಳ ಆದ್ಯತೆಗಳು ಈಗ ಬದಲಾಗಿವೆ. ಉತ್ತರಪ್ರದೇಶದ ರೈತರ ಹತ್ಯೆ ಘಟನೆಗಳಿಗೆ ಕೆಲವು ಪತ್ರಿಕೆಗಳು ಮುಖಪುಟದಲ್ಲಿ ಜಾಗವನ್ನೇ ನೀಡಲಿಲ್ಲ. ಪತ್ರಕರ್ತರಾದವರು ಆಲೋಚನೆ, ನಿಲುವು, ಧೋರಣೆಗಳನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರು.

ADVERTISEMENT

ಪತ್ರಿಕೆಗಳಲ್ಲಿ ಸುದ್ದಿಯ ಜತೆ ಬಳಸುವ ಭಾಷೆಯೂ ಮುಖ್ಯ. ಪತ್ರಿಕೋದ್ಯಮಕ್ಕೆ ತರಬೇತಿ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಪತ್ರಿಕೋದ್ಯಮಕ್ಕೆ ಸೇರಿದರೆ ಮೊದಲ ವರದಿ ಪ್ರಕಟವಾಗಲು 6 ತಿಂಗಳು ಕಾಯಬೇಕಿತ್ತು. ಇಂದು ಪರಿಸ್ಥಿತಿ ಬದಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ ಸಂಪಾದಕ ಸಂಪಾದಕ ರವಿ ಹೆಗಡೆ ಮಾತನಾಡಿ, ‘ಡಿಜಿಟಲ್‌ ಮಾಧ್ಯಮಗಳಿಗೆ ಪ್ರಾಮುಖ್ಯ ಬಂದ ಮೇಲೆ ಓದುಗರೇ ಸಂಪಾದಕರಾಗಿದ್ದಾರೆ. ಮುದ್ರಣ, ದೃಶ್ಯ ಮಾಧ್ಯಮಗಳಿಗಿಂತ ಹೆಚ್ಚು ವೀಕ್ಷಕರನ್ನು ಜಾಲತಾಣಗಳು ತಲುಪುತ್ತಿದೆ. ಪತ್ರಿಕೋದ್ಯಮ ಈಗ ತಾಂತ್ರಿಕೋದ್ಯಮವಾಗಿ ಬದಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.

ಪತ್ರಿಕೋದ್ಯಮ ಎಲ್ಲಾ ಆರೋಪಗಳನ್ನು ಅರಗಿಸಿಕೊಂಡು ಬೆಳೆಯುತ್ತಿದೆ. ಮಾಧ್ಯಮಗಳ ಕುರಿತು ಹಲವು ಮಾತುಗಳು, ವಿರೋಧಗಳು, ಗೊಂದಲಗಳಿವೆ. ಪತ್ರಿಕೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂಬ ಮಾತುಗಳು ಇವತ್ತಿನದೇನೂ ಅಲ್ಲ. ಹಲವು ವರ್ಷಗಳಿಂದ ಪತ್ರಿಕೋದ್ಯಮದ ಜತೆಗೇ ಬಂದಿದೆ. ಬದಲಾವಣೆ ಅನಿವಾರ್ಯ. ಅದು ಪತ್ರಿಕೋದ್ಯಮದಲ್ಲಿಯೂ ಆಗಿದೆ.ಆದರೆ, ಒಪ್ಪಿತ ವಿಷಯಗಳ ಹೇರಿಕೆಸರಿಯಲ್ಲ. ಯಾವ ಬದಲಾವಣೆಗಳಿದ್ದರೂ, ಪತ್ರಿಕೋದ್ಯಮದ ಆಶಯಗಳಿಗೆ ಧಕ್ಕೆಯಾಗಬಾರದು ಎಂದು ಆಶಯ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳು ಪತ್ರಿಕೋದ್ಯಮದ ಭಾಗಗಳನ್ನು ಹಂಚಿಕೊಳ್ಳುತ್ತಿವೆ. ಗೂಗಲ್ ಎನ್ನುವುದು ಬಹುದೊಡ್ಡ ಮಾಧ್ಯಮವಾಗಿದೆ. ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳು ಗಮನಸೆಳೆಯುತ್ತಿವೆ. ಇದರ ಮಧ್ಯೆಯೂ ಮುದ್ರಣ ಮಾಧ್ಯಮ ಜೀವಂತವಾಗಿದೆ. ಸಂಪ್ರದಾಯ ಉಳಿಸಿಕೊಂಡಿದೆ. ಕೆಲವು ಒಳ್ಳೆಯ ಪತ್ರಿಕೆಗಳು ನಾಶವಾಗುತ್ತಿವೆ ಎಂದುವಿಶ್ಲೇಷಿಸಿದರು.

‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ಎಸ್.ರಶ್ಮಿ ಮಾತನಾಡಿ, ‘ಸುದ್ದಿಮನೆಗಳು ಬಹುಮಾಧ್ಯಮ ಮನೆಗಳಾಗಿ ಬದಲಾಗಿವೆ. ಸುದ್ದಿಗಳ ಚೌಕಟ್ಟು ಬದಲಾಗಿದೆ. ಓದುಗರು ಸುದ್ದಿ ಓದುವ ಬದಲು ಕೇವಲ ಕಣ್ಣಾಡಿಸುವ ಮಟ್ಟಕ್ಕೆ ಬಂದಿದ್ದಾರೆ.ಜೋರುಧ್ವನಿಯ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ’ ಎಂದು ವಿವರಿಸಿದರು.

ಪತ್ರಕರ್ತ ನ.ರಾ. ವೆಂಕಟೇಶ್ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಶಸ್ತಿ ಪುರಸ್ಕೃತರಾದ ಎನ್.ಡಿ. ಶಾಂತಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ರಮೇಶ್ ಶೆಟ್ಟಿ, ಮೋಹನ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.