ADVERTISEMENT

ಚುರುಕು ಪಡೆದ ಕೆಳದಿ ಹಿರೇಕೆರೆ ಹೂಳೆತ್ತುವ ಕಾಮಗಾರಿ

ನೆರವಿಗೆ ಒಡ್ಡರ ತಿಮ್ಮವ್ವ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ. ಸತ್ಯನಾರಾಯಣ ಮನವಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:49 IST
Last Updated 12 ಮೇ 2022, 4:49 IST
ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದ ಹಿರೇಕೆರೆಯ ಹೂಳೆತ್ತುವ ಕಾಮಗಾರಿ ಭರದಿಂದ ಸಾಗಿದೆ.
ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದ ಹಿರೇಕೆರೆಯ ಹೂಳೆತ್ತುವ ಕಾಮಗಾರಿ ಭರದಿಂದ ಸಾಗಿದೆ.   

ಸಾಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದ ಹಿರೇಕೆರೆಯ ಹೂಳೆತ್ತುವ ಕಾಮಗಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಭರದಿಂದ ನಡೆಯುತ್ತಿದೆ.

ಸಾರ್ವಜನಿಕರು ಉದಾರ ಮನಸ್ಸಿನಿಂದ ನೆರವು ನೀಡುವ ಮೂಲಕ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಒಡ್ಡರ ತಿಮ್ಮವ್ವ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ. ಸತ್ಯನಾರಾಯಣ ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘600 ವರ್ಷಗಳ ಇತಿಹಾಸ ಹೊಂದಿರುವ ಕೆಳದಿ ಹಿರೇಕೆರೆಯು 108 ಎಕರೆ ವಿಸ್ತಾರ ಹೊಂದಿದ್ದು, ಈ ಪೈಕಿ 16 ಎಕರೆ ಪ್ರದೇಶದ ಹೂಳು ಎತ್ತುವ ಯೋಜನೆಗೆ ಧರ್ಮಸ್ಥಳದ ವತಿಯಿಂದ ₹ 12.75 ಲಕ್ಷ ಅನುದಾನ ನೀಡಲಾಗಿದೆ. ಹೂಳೆತ್ತುವ ಕೆಲಸಕ್ಕೆ ಇನ್ನೂ ₹ 25 ಲಕ್ಷ ಅಗತ್ಯವಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಅವರು ಕೋರಿದರು.

ADVERTISEMENT

‘ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಹಿರೇಕೆರೆ ಅಭಿವೃದ್ಧಿಗೆ ಸರ್ಕಾರದಿಂದ ₹ 2 ಕೋಟಿ ಅನುದಾನ ನೀಡಿದ್ದರು. 2020-21ನೇ ಸಾಲಿನಲ್ಲಿ ಶಾಸಕ ಹಾಲಪ್ಪ ಅವರು ಕೆರೆಕೋಡಿ ಸಿಮೆಂಟ್ ಗೋಡೆ ನಿರ್ಮಿಸಲು ₹ 90 ಲಕ್ಷ ಅನುದಾನ ಕೊಡಿಸಿದ್ದಾರೆ. ಕೆರೆಯ ಹೂಳೆತ್ತುವ ಮೂಲಕ ಅದರ ಸಮಗ್ರ ಅಭಿವೃದ್ಧಿಗೆ ಗ್ರಾಮಸ್ಥರು ಸಂಕಲ್ಪ ಮಾಡಿದ್ದು, ಕಾಮಗಾರಿ ಭರದಿಂದ ಸಾಗಿದೆ’ ಎಂದು ಅವರು ಮಾಹಿತಿ
ನೀಡಿದರು.

ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ಎಚ್.ಎಸ್. ರಮೇಶ್, ‘ಕೆರೆಯ ಅಭಿವೃದ್ಧಿಗಾಗಿ ಜಲಸಂವರ್ಧನೆ ಯೋಜನೆಯಡಿ ರೈತರಿಂದ ಸಂಗ್ರಹಿಸಿರುವ ₹ 2.11 ಲಕ್ಷ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. 46 ಜನ ಕೆರೆಯ ಒತ್ತುವರಿದಾರರಿಗೆ ಪರಿಹಾರ ಕೊಡಿಸಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.

2017-18ನೇ ಸಾಲಿನವರೆಗೆ ಕೆರೆ ಬಳಕೆದಾರರ ಸಂಘವು ಮೀನು ಸಾಕಾಣಿಕೆ ಮಾಡಿ ಬಂದ ಲಾಭಾಂಶದಲ್ಲಿ ಸುಮಾರು ₹ 10 ಲಕ್ಷ ಮೊತ್ತವನ್ನು ಕೆರೆ ಅಭಿವೃದ್ಧಿಗೆ ಬಳಸಿದೆ. 2021-22ನೇ ಸಾಲಿನಲ್ಲಿ ಮೀನು ಸಾಕಾಣಿಕೆಯಿಂದ ಬಂದಿರುವ ₹ 12.32 ಲಕ್ಷ ಮೊತ್ತವನ್ನು ಕೆರೆ ಹೂಳು ತೆಗೆಯಲು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆರೆ ಅಭಿವೃದ್ಧಿ ಕಾಮಗಾರಿಗೆ ನೆರವು ನೀಡಲು ಬಯಸುವವರು ಕೆನರಾ ಬ್ಯಾಂಕ್, ಕೆಳದಿ ಶಾಖೆ, ಖಾತೆ ನಂ: 0583101017619 (ಐಎಫ್‌ಎಸ್‌ಸಿ ಕೋಡ್: ಸಿಎನ್ಆರ್‌ಬಿ 0000583) ಈ ಖಾತೆಗೆ ಹಣ ಕಳುಹಿಸಬಹುದು ಎಂದರು.

ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಕೆ.ಆರ್. ದುರ್ಗಪ್ಪ, ಪ್ರಮುಖರಾದ ಮಹಾರಾಜ, ಮಹಾದೇವಪ್ಪ, ಸುನೀಲ್ ಕುಮಾರ್, ಕೆ.ಆರ್. ನಾಗರಾಜ್, ಗೋಪಾಲಕೃಷ್ಣ, ಪ್ರಶಾಂತ್, ಕೆರೆಸ್ವಾಮಿ, ಕೆ.ವಿ. ಮಂಜಪ್ಪ, ರಮೇಶ್ ಕೆಳದಿ, ಶಾಂತರಾಜ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.