ADVERTISEMENT

ಆಕಾಂಕ್ಷಿಗಳಲ್ಲಿ ಗೊಂದಲ ತಂದ ಪಟ್ಟಿ

ಕೆ.ಎನ್.ಶ್ರೀಹರ್ಷ
Published 4 ಜುಲೈ 2021, 7:19 IST
Last Updated 4 ಜುಲೈ 2021, 7:19 IST

ಭದ್ರಾವತಿ: ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಮೀಸಲಾತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಒಂದೆಡೆ ರಾಜಕೀಯ ಚಟುವಟಿಕೆ ಗರಿಗೆದರಿದರೆ, ಮತ್ತೊಂದೆಡೆ ಅಪಸ್ವರದ ಮಾತು ಕೇಳಿಬರುತ್ತಿದೆ.

ಭದ್ರಾವತಿ ಕ್ಷೇತ್ರದ ಮೂರು ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ತಾಲ್ಲೂಕಿನಲ್ಲಿದ್ದು, ಕ್ಷೇತ್ರ ವಿಂಗಡಣೆ ನಂತರದ ಚಿತ್ರಣದಲ್ಲಿ ಸಾಕಷ್ಟು ಗೊಂದಲವಿದೆ ಎಂಬುದು ಕೆಲವರ ಅಭಿಪ್ರಾಯ.

ಮೂರು ಸ್ಥಾನ ಮಹಿಳೆಯರಿಗೆ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಮೂರು ಜಿಲ್ಲಾ ಪಂಚಾಯಿತಿ ಸ್ಥಾನಗಳು ಮಹಿಳೆಯರ ಪಾಲಿಗೆ ಸಿಕ್ಕಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಸಿಂಗನಮನೆ–ದೊಣಬಘಟ್ಟ ಕ್ಷೇತ್ರ ಸಾಮಾನ್ಯ ಮಹಿಳೆ, ಯರೇಹಳ್ಳಿ–ಹಿರಿಯೂರು ಎಸ್ಸಿ ಮಹಿಳೆ ಹಾಗೂ ತಡಸ–ಕೂಡ್ಲಿಗೆರೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಪುರಷರಿಗೆ ಅವಕಾಶವೇ ಇಲ್ಲದ ಸ್ಥಿತಿ ಎದುರಾಗಿದೆ. ಇನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಗರದಹಳ್ಳಿ–ಆನವೇರಿ ಸಾಮಾನ್ಯ ಹಾಗೂ ಅರಬಿಳಚಿ ಬಿಸಿಎಂ ‘ಬಿ’ ವರ್ಗಕ್ಕೆ ಮೀಸಲಾಗಿದ್ದು ಬಹಳಷ್ಟು ಆಕಾಂಕ್ಷಿಗಳ ಕ್ಷೇತ್ರವಾಗಿ ಪರಿಣಮಿಸಿದೆ.

‘ಕ್ಷೇತ್ರದ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ನಿಗದಿ ಮಾಡಿರುವ ಮೀಸಲಾತಿ ದುರುದ್ದೇಶದಿಂದ ಕೂಡಿದ್ದು, ಪುರುಷರಿಗೆ ಅವಕಾಶವಿಲ್ಲದ ರೀತಿ ಮಾಡುವಲ್ಲಿ ಬಿಜೆಪಿ ಶಕ್ತಿಗಳು ಕೆಲಸ ಮಾಡಿವೆ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ದೂರಿದರು.

‘ಆರು ವಿಧಾನಸಭಾ ಕ್ಷೇತ್ರದಲ್ಲಿ ಬೇಕಾದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಿಕೊಂಡಿರುವ ಅವರು, ಇಲ್ಲಿ ಮಾತ್ರ ಮೂರು ಕ್ಷೇತ್ರವನ್ನು ಮಹಿಳೆಯರಿಗೆ ಮೀಸಲಿಟ್ಟು ಪಿತೂರಿ ರಾಜಕಾರಣ ನಡೆಸಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ಮಾಡಿರುವ ಮೀಸಲಾತಿ ಅವೈಜ್ಞಾನಿಕವಾಗಿದೆ. ಇದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸಲು ಒತ್ತಾಯಿಸಿ ಬಿಜೆಪಿ ಆಕ್ಷೇಪಣೆ ಸಲ್ಲಿಕೆ ಮಾಡಲಿದೆ’ ಎಂದು ಮಂಡಲ ಅಧ್ಯಕ್ಷ ಪ್ರಭಾಕರ ಹೇಳಿದರು.

‘ಮೀಸಲಾತಿ ಪಟ್ಟಿ ಬಂದಿದೆ. ಪಕ್ಷವು ಏನೇ ಬದಲಾವಣೆ ತಂದರೂ ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಕುರಿತು ಸೋಮವಾರ ಪ್ರಮುಖರ ಸಭೆ ನಡೆಸುತ್ತೇವೆ’ ಎಂದು ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ ತಿಳಿಸಿದರು.

‘ಮೀಸಲಾತಿ ನಿಯಮ ಉಲ್ಲಂಘಿಸಿ ಮೂರು ಕ್ಷೇತ್ರವನ್ನು ಮಹಿಳೆಯರಿಗೆ ಮೀಸಲು ಮಾಡಿರುವುದು ಸರಿಯಲ್ಲ. ಅದೇ ರೀತಿ ಒಟ್ಟು ಕ್ಷೇತ್ರದಲ್ಲಿ ಶೇ 50ರಷ್ಟು ಮೀಸಲಾತಿ ಮೀರುವಂತಿಲ್ಲ. ಆದರೆ ಅದರ ಉಲ್ಲಂಘನೆ ಪಟ್ಟಿಯಲ್ಲಾಗಿದ್ದು, ಇದನ್ನು ಕೂಡಲೇ ಪರಿಶೀಲಿಸಿ ಸರಿ ಮಾಡಬೇಕು’ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಟಿ. ಚಂದ್ರೇಗೌಡ
ಆಗ್ರಹಿಸಿದರು.

‘ಬಂದಿರುವ ಪಟ್ಟಿ ಕುರಿತಾಗಿ ನಮ್ಮ ಯಾವುದೇ ತಕರಾರಿಲ್ಲ. ಇದಕ್ಕೆ ತಕ್ಕಂತೆ ಸ್ಪರ್ಧೆಗೆ ಸಜ್ಜು ಮಾಡುವ ನಿಟ್ಟಿನಲ್ಲಿ ನಮ್ಮ ಕೆಲಸ ಮಾಡುತ್ತೇವೆ’ ಎನ್ನುವ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ತಾವು ಸ್ಪರ್ಧಿಸುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ’ ಎಂದರು.

ಕಳೆದ ಬಾರಿ ಆನವೇರಿ ಕ್ಷೇತ್ರದಿಂದ ಸ್ಪರ್ಧಿಸಿ 70 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಮುಖಂಡ ಮಧುಸೂದನ್, ‘ನಮ್ಮ ಸ್ಪರ್ಧೆಗೆ ಮೀಸಲಾತಿ ಬಂದಿಲ್ಲ. ನಮ್ಮ ಪಕ್ಷದಿಂದ ಸ್ಪರ್ಧಿಸುವರಿಗೆ ಸಹಕಾರ ನೀಡುತ್ತೇವೆ’ ಎಂದರು.

‘ಪಕ್ಷ ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ. ಇದರ ಆಧಾರದ ಮೇಲೆ ಮೀಸಲಾತಿ ನಮಗೆ ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರಿಗೆ ಅವಕಾಶವಾಗಲಿದೆ’ ಎನ್ನುವ ಬಿಜೆಪಿ ಮುಖಂಡ ಗೋಕುಲ್ ಕೃಷ್ಣ ಮೀಸಲಾತಿ ಯುವಕರಿಗೆ ನಿರಾಸೆ ತಂದಿದೆ ಎನ್ನುತ್ತಾರೆ.

ಸದ್ಯ ಕ್ಷೇತ್ರದ ಮೀಸಲು ಕುರಿತಂತೆ ಪಕ್ಷಗಳ ಮುಖಂಡರಲ್ಲೇ ಭಿನ್ನ ಅಭಿಪ್ರಾಯಗಳಿದ್ದು, ಮೀಸಲು ಬದಲಿಗೆ ಚುನಾವಣಾ ಆಯೋಗದ ಕದ ತಟ್ಟುವ ನಿಟ್ಟಿನಲ್ಲೂ ಮುಖಂಡರು ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.