ADVERTISEMENT

8 ಕೆ.ಜಿ ಚಿನ್ನದ ಆಮಿಷ: ಜಮೀನು ಕಳೆದುಕೊಂಡ ದಂಪತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 5:17 IST
Last Updated 11 ನವೆಂಬರ್ 2022, 5:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೊಳೆಹೊನ್ನೂರು: ₹20 ಲಕ್ಷಕ್ಕೆ 8 ಕೆ.ಜಿ. ಬಂಗಾರ ಕೊಡುವುದಾಗಿ ನಂಬಿಸಿ ವಂಚಿಸಿದ ಪರಿಣಾಮ ಬಾಗಲಕೋಟೆ ಜಿಲ್ಲೆಯ ದಂಪತಿ ಜಮೀನು ಕಳೆದುಕೊಳ್ಳುವಂತಾಗಿದ್ದು, ಈ ಬಗ್ಗೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದ ಸೋಮಯ್ಯ ನಿಂಗಯ್ಯ ಹಾಗೂ ಶಕುಂತಲಾ ದಂಪತಿ ವಂಚನೆಗೆ ಒಳಗಾದವರು. ನಾಗರಾಜ ಹಾಗೂ ಮಂಜುನಾಥ್‌ ವಂಚಿಸಿದ ಆರೋಪಿಗಳು.

ಮಹಾಲಿಂಗಾಪುರದ ಸೋಮಯ್ಯ ನಿಂಗಯ್ಯ ಅವರು ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿದಾಗ ನಾಗರಾಜ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಸೋಮಯ್ಯ ಅವರಿಗೆ ಕರೆ ಮಾಡಿದ ವಂಚಕ ನಾಗರಾಜ, ‘ನನ್ನ ಅಜ್ಜಿಗೆ 8 ಕೆ.ಜಿ. ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡುವೆವು’ ಎಂದಿದ್ದ. ಅಷ್ಟೇ ಅಲ್ಲ, ‘ನಿಮಗಾದರೆ ಕಡಿಮೆ ಬೆಲೆಗೆ ಕೊಡುತ್ತೇನೆ’ ಎಂದು ಪುಸಲಾಯಿಸಿದ್ದ.

ADVERTISEMENT

ವಂಚಕನ ಮಾತು ನಂಬಿದ ಸೋಮಯ್ಯ ಈ ವಿಷಯವನ್ನು ಪತ್ನಿಗೆ ಹೇಳಿದ್ದಾರೆ. ಅಷ್ಟೂ ಚಿನ್ನವನ್ನು ತಾವೇ ಪಡೆಯುವ ಬಗ್ಗೆ ದಂಪತಿ ಯೋಚಿಸಿದ್ದರು. ಅಷ್ಟರಲ್ಲಿ ಮತ್ತೆ ಮಾತಿಗೆ ಸಿಕ್ಕ ವಂಚಕ, ‘ನಿಮಗಾದರೆ ಕೇವಲ ₹ 20 ಲಕ್ಷಕ್ಕೆ ಎಲ್ಲ ಚಿನ್ನವನ್ನು ಕೊಡುವೆ’ ಎಂದು ನಂಬಿಸಿದ್ದಾನೆ.

ವಂಚಕನ ಮಾತಿಗೆ ಮರುಳಾದ ದಂಪತಿ ಆಗಸ್ಟ್‌ 15ರಂದು ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ಬಂದಿದ್ದರು. 2 ಚಿನ್ನದ ನಾಣ್ಯಗಳನ್ನು ಕೊಟ್ಟು, ‘ಚಿನ್ನದ ಅಸಲಿತನ ಪರೀಕ್ಷೆ ಮಾಡಿಕೊಳ್ಳಿ’ ಎಂದು ನಾಗರಾಜ ತಿಳಿಸಿದ್ದ. ಚಿನ್ನಾಭರಣ ಮಳಿಗೆಗೆ ಹೋಗಿ ನಾಣ್ಯಗಳನ್ನು ಪರೀಕ್ಷಿಸಿದಾಗ ಅವು ಅಸಲಿ ನಾಣ್ಯಗಳಾಗಿದ್ದವು.

ಎಲ್ಲ ನಾಣ್ಯಗಳನ್ನು ಪಡೆಯುವ ಆಲೋಚನೆಯಿಂದ ದಂಪತಿಯು ಮಹಾಲಿಂಗಾಪುರದಲ್ಲಿದ್ದ ಜಮೀನನ್ನು ಮಾರಾಟ ಮಾಡಿ ಆಗಸ್ಟ್‌ 24ರಂದು ₹20 ಲಕ್ಷದೊಂದಿಗೆ ವಂಚಕ ಹೇಳಿದ ಜಾಗಕ್ಕೆ ಬಂದಿದ್ದರು. ನಾಗರಾಜ ಜೊತೆಗೆ ಮಂಜುನಾಥ್‌ ಎಂಬುವವನು ಕೈಜೋಡಿಸಿದ್ದು, ಇಬ್ಬರೂ ನಾಲ್ಕೈದು ನಕಲಿ ನಾಣ್ಯಗಳನ್ನು ದಂಪತಿಗೆ ಕೊಟ್ಟು ಹಣ ಪಡೆದಿದ್ದಾರೆ.

‘ಉಳಿದ ನಾಣ್ಯಗಳನ್ನು ತರುತ್ತೇವೆ. ಅಲ್ಲಿಯವರೆಗೆ ಇಲ್ಲಿಯೇ ಇರಿ’ ಎಂದು ಹೇಳಿದ್ದರು. ವಂಚಕರು ಬಹಳ ಹೊತ್ತಾದರೂ ವಾಪಸ್‌ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್ ಆಗಿತ್ತು. ಆಗ ದಂಪತಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ನವೆಂಬರ್ ಮೊದಲ ವಾರದಲ್ಲಿ ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಹೊಡೆದಾಟ: ವ್ಯಕ್ತಿ ಸಾವು

ತುಮರಿ: ಇಲ್ಲಿನ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿಯ ಮರಾಠಿ ಗ್ರಾಮದ ಮುರಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗ್ರಾಮದ ಸಿದ್ದು ಹಾಗೂ ತಿಮ್ಮ ಅವರ ನಡುವೆ ನಡೆದ ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಂಡ ತಿಮ್ಮ (45) ಮೃತಪಟ್ಟಿದ್ದಾರೆ.

ನ. 8ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ರೋಹನ್ ಜಗದೀಶ್ ಭೇಟಿ ನೀಡಿದ್ದರು. ಆರೋಪಿ ಸಿದ್ದುನನ್ನು ಬಂಧಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರ್ಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.