ADVERTISEMENT

ಮಹಾಸಭೆ ಕರೆಯದ ಮಾರಿಕಾಂಬಾ ಸಮಿತಿ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 3:45 IST
Last Updated 30 ಸೆಪ್ಟೆಂಬರ್ 2021, 3:45 IST

ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯು 2013ರಿಂದ ಇಲ್ಲಿಯವರೆಗೂ ಸಕಾಲದಲ್ಲಿ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಕರೆದು ಲೆಕ್ಕಪತ್ರ ಮಂಡಿಸದೇ ಲೋಪ ಎಸಗಿದೆ ಎಂದು ಮಾರಿಕಾಂಬಾ ದೇವಸ್ಥಾನದ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ. ಆನಂದ್ ಆರೋಪಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ 2020ರಲ್ಲಿ ನಡೆದ ಮಾರಿಕಾಂಬಾ ಜಾತ್ರೆಯ ಲೆಕ್ಕಪತ್ರವನ್ನು ಜಾತ್ರೆ ಮುಗಿದು ಆರು ತಿಂಗಳೊಳಗಾಗಿ ನೀಡುವುದಾಗಿ ಲಿಖಿತ ಹೇಳಿಕೆ ನೀಡಿದ್ದ ವ್ಯವಸ್ಥಾಪಕ ಸಮಿತಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈ ಬಗ್ಗೆ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ದೇವಸ್ಥಾನದ ಹಾಲಿ ಆಡಳಿತ ಸಮಿತಿಯು ಕುಂಟು ನೆಪಗಳನ್ನು ಹೇಳಿ ಸಮಿತಿಯ ಮಹಾಸಭೆ ಕರೆಯುವುದನ್ನು ಮುಂದಕ್ಕೆ ಹಾಕುತ್ತಲೇ ಇದೆ. ಹಣಕಾಸಿನ ವಹಿವಾಟನ್ನು ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ನಡೆಸದೆ ವಹಿವಾಟು ನಡೆಸಿರುವ ದೂರುಗಳೂ ಇವೆ. ಈ ಬಗ್ಗೆ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಪ್ರಶ್ನಿಸಲಾಗುವುದು’ ಎಂದು ಹೇಳಿದರು.
‘ದೇವಸ್ಥಾನದ ಹಾಲಿ ಸಮಿತಿಯನ್ನು ನ್ಯಾಸ ವ್ಯವಸ್ಥೆಗೆ ಒಳಪಡಿಸಬೇಕು ಎಂಬ ಉದ್ದೇಶದ ಪ್ರಕರಣ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ದಾವೆಯಲ್ಲಿ ಹಿತಾಸಕ್ತಿಯುಳ್ಳವರು ಹಾಜರಾಗುವಂತೆ ನೀಡಿದ ಪ್ರಕಟಣೆ ಆಧರಿಸಿ ಸಮಿತಿಯ 17 ಸದಸ್ಯರು ಎದುರುದಾರರಾಗಿ ಹಾಜರಾಗಿದ್ದಾರೆ. ಆದರೆ ಹಾಲಿ ಸಮಿತಿ ಪ್ರಮುಖರು ನಾವೇ ನ್ಯಾಯಾಲಯಕ್ಕೆ ಹೋಗಿದ್ದೇವೆ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ದೇವಸ್ಥಾನದ ಸಮಿತಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ವಿರೋಧಿಸಿ ಅ.21ರಂದು ಪ್ರತಿಭಟನೆ ನಡೆಸಲಾಗುವುದು ಎಂದರು. ಪ್ರಮುಖರಾದ ವಿ.ಶಂಕರ್, ಗೋಪಾಲಕೃಷ್ಣ ಶ್ಯಾನುಭಾಗ್, ನಿತ್ಯಾನಂದ ಶೆಟ್ಟಿ, ಧರ್ಮರಾಜ್, ಕೊಟ್ರಪ್ಪ, ಆನಂದ ಗಾಣಿಗ, ಗುರುಬಸವಲಿಂಗ, ಬಸವರಾಜ್, ಜನಾರ್ದನ್ ಆಚಾರಿ, ಗೋಪಣ್ಣ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.