ಶಿವಮೊಗ್ಗ: ‘ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿಯನ್ನು ಒಟ್ಟಿಗೆ ನಡೆಸಲು ನಿರ್ಧರಿಸುವುದು ಸ್ವಾಗತಾರ್ಹ. ಇದನ್ನು ವೈಜ್ಞಾನಿಕವಾಗಿ ನಡೆಸಬೇಕು ಮತ್ತು ಎಲ್ಲ ಜಾತಿಯ ಜನರು ಪ್ರಜ್ಞಾಪೂರ್ವಕವಾಗಿ ವಾಸ್ತವ ಸಂಗತಿಗಳನ್ನು ತಿಳಿಸಬೇಕು’ ಎಂದು ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮನವಿ ಮಾಡಿದರು.
‘ನಾನಿಲ್ಲಿ ಯಾವುದೇ ಪಕ್ಷಕ್ಕೆ ಸೇರಿ ಮಾತನಾಡುತ್ತಿಲ್ಲ. ಹಾಗೆಯೇ ಯಾವುದೇ ಜಾತಿ, ಧರ್ಮವನ್ನು ಪ್ರತಿನಿಧಿಸುವ ಹೇಳಿಕೆ ನೀಡುತ್ತಿಲ್ಲ. ಪಕ್ಷಾತೀತವಾಗಿ ಈ ವಿಚಾರವನ್ನು ಹೇಳುತ್ತಿದ್ದೇನೆ. ದೇಶದಲ್ಲಿ ಎಲ್ಲ ಜಾತಿಯ ಸಮೀಕ್ಷೆ ನಡೆಯಬೇಕಿದೆ. ಜತೆಗೆ ಪ್ರತಿ ವರ್ಷಕೊಮ್ಮೆ ದೇಶದಲ್ಲಿ ವೈಜ್ಞಾನಿಕವಾದ ಸಮೀಕ್ಷೆ ನಡೆಸುವ ಹೊಣೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಮಂತ್ರಿಯೊಬ್ಬರನ್ನು ಮಾಡಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಾತಿ ಗಣತಿ ವಿಚಾರದಲ್ಲಿ ಎಲ್ಲಾ ಜಾತಿಯ ಜನರಿಗೂ ತಮ್ಮ ತಮ್ಮ ಜಾತಿಯ ನಿಖರ ಅಂಕೆ ಸಂಖ್ಯೆಗಳು ಗೊತ್ತಿಲ್ಲ, ಎಲ್ಲರೂ ಕೋಟಿಗಳ ಮೇಲೆಯೇ ಇದ್ದೇವೆಂದು ಹೇಳುತ್ತಾರೆ. ದೇಶದ ಜನ ಸಂಖ್ಯೆ ಎಷ್ಟು ಎಂದು ಕೇಳಿದರೆ 100 ಕೋಟಿ ಎನ್ನುವ ಮಾತು ಮಾಮೂಲು ಆಗಿದೆ. ಆದರೆ ನಿಖರವಾದ ಅಂಕೆ ಸಂಖ್ಯೆಗಳು ನಮಗೆ ಗೊತ್ತಾಗಬೇಕಾದರೆ ಎಲ್ಲಾ ಜಾತಿ ಜನರ ಗಣತಿ ಅಗತ್ಯ. ಹಾಗೆಯೇ ಜನಗಣತಿಯೂ ಅಗತ್ಯ ಎಂದು ಅವರು ಹೇಳಿದರು.
‘ಜಾತಿ ಗಣತಿ ಅಥವಾ ಜನಗಣತಿ ಬಗ್ಗೆ ಜನರಿಗೆ ಅರಿವು ಮುಖ್ಯ. ಈ ನಿಟ್ಟಿನಲ್ಲಿ ಎಲ್ಲ ಮಠಾಧೀಶರು ಕೂಡ ಜನರಲ್ಲಿ ಅರಿವು ಮೂಡಿಸಬೇಕಿದೆ. ವೀರಶೈವ ಲಿಂಗಾಯತ ಸಮಾಜದ ಜನರಲ್ಲಿ ಮಠಾಧೀಶರು ಅರಿವು ಮೂಡಿಸಬೇಕು. ಕೇವಲ ಪೂಜೆ ಪುನಸ್ಕಾರ ಮಾಡಿಕೊಂಡಿದ್ದರೆ ಮಾತ್ರ ಸಾಲದು, ನಮ್ಮ ನಮ್ಮ ಜಾತಿಗಳ ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲದೆ ಹೋದರೆ ನಾವು ನಮ್ಮ ಸಮಾಜಕ್ಕೆ ಮೋಸ ಮಾಡಿದಂತಾಗುತ್ತದೆ. ಹಾಗಾಗಿ ಸಮೀಕ್ಷೆಗೆ ಬಂದಾಗ ಮನೆಯಲ್ಲಿದ್ದವರು ಸರಿಯಾದ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಯಣ್ಣ, ಆರಾಧ್ಯ, ಶಿವಣ್ಣ ಹಾಗೂ ಮೊಹಮ್ಮದ್ ಇಕ್ಬಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.