ADVERTISEMENT

ಆರ್‌ಸಿಇಪಿ ಒಪ್ಪಂದ ವಿರೋಧಿಸಿ 31ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:31 IST
Last Updated 25 ಅಕ್ಟೋಬರ್ 2019, 13:31 IST
ಎಚ್‌.ಆರ್.ಬಸವರಾಜಪ್ಪ
ಎಚ್‌.ಆರ್.ಬಸವರಾಜಪ್ಪ   

ಶಿವಮೊಗ್ಗ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅ.31ರಂದು ಬೆಳಿಗ್ಗೆ 10ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದೆ.

ಆಗ್ನೇಯ ಏಷ್ಯಾದ 16 ದೇಶಗಳ ಜತೆ ಮುಕ್ತ ವ್ಯಾಪಾರಕ್ಕೆ ನ.4 ರಂದು ಸಹಿ ಹಾಕಲು ಸಿದ್ಧತೆ ನಡೆದಿದೆ. ಈ ಒಪ್ಪಂದ ರೈತ ವಿರೋಧಿಯಾಗಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಒಪ್ಪಂದದ ಪರಿಣಾಮ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಇಲ್ಲವಾಗುತ್ತದೆ. ಹಲವು ದೇಶಗಳು ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮುಕ್ತವಾಗಿ ಮಾರಾಟ ಮಾಡಲು ಅನುಕೂಲವಾಗುತ್ತದೆ. ದೇಶದ ಕೊಟ್ಯಂತರ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಹೈನುಗಾರಿಕೆ, ಅಡಿಕೆ, ರೇಷ್ಮೆ, ತೋಟಗಾರಿಕೆ, ಸಾಂಬಾರು ಉತ್ಪನ್ನಗಳಿಗೂ ಅಪಾಯ ಎದುರಾಗಲಿದೆ. ಮೇಲೂ ಪರಿಣಾಮ ಬೀರಿ ರೈತರ ಬದುಕೇ ನಾಶವಾಗುತ್ತದೆ ಎಂದರು.

ADVERTISEMENT

ಕೆಲವು ದೇಶಗಳು ಉತ್ಪಾದಕರಿಂದ ಖರೀದಿಸಿದ ಹಾಲು ಸಮುದ್ರಕ್ಕೆ ಸುರಿಯುತ್ತಿವೆ. ಅಂಥ ದೇಶಗಳು ಒಪ್ಪಂದದ ಫಲವಾಗಿ ಅತ್ಯಂತ ಕಡಿಮೆ ದರದಲ್ಲಿ ದೇಶದ ಮಾರುಕಟ್ಟೆಗೆ ತಂದು ಸುರಿಯುತ್ತಾರೆ. ಕಳಪೆ ಹಾಲು, ಕಳಪೆ ಅಡಿಕೆ, ಕಳಪೆ ಬೀಜ ಇವೆಲ್ಲವೂ ಭಾರತಕ್ಕೆ ಆಮದಾಗುತ್ತವೆ ಎಂದು ವಿವರ ನೀಡಿದರು.

ಇಂತಹ ಒಪ್ಪಂದಗಳ ಬದಲು ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಜಗತ್ತಿನ ಹಲವು ರಾಷ್ಟ್ರಗಳು ರೈತರ ಎಲ್ಲ ಬೆಲೆಗಳಿಗೆ ನೇರ ಸಬ್ಸಿಡಿ ನೀಡುತ್ತಿವೆ. ಅದೇ ರೀತಿ ಕೇಂದ್ರವೂ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಬಿ.ಎಂ.ಚಿಕ್ಕಸ್ವಾಮಿ, ಕೆ.ರಾಘವೇಂದ್ರ, ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ರಾಮಚಂದ್ರಪ್ಪ, ಇ.ಬಿ.ಜಗದೀಶ್, ಶಿವಮೂರ್ತಿ, ರುದ್ರೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.