ADVERTISEMENT

ವೈದ್ಯಕೀಯ ಕಾಲೇಜು: ಎನ್‌ಆರ್‌ಐ ಕೋಟಾಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 14:46 IST
Last Updated 11 ಜನವರಿ 2019, 14:46 IST
ಶಿವಮೊಗ್ಗದಲ್ಲಿ ಶುಕ್ರವಾರ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೂ ಕೋಟಾ ನೀಡುವ ಪ್ರಸ್ತಾವ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೂ ಕೋಟಾ ನೀಡುವ ಪ್ರಸ್ತಾವ ವಿರೋಧಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೂ ಕೋಟಾ ನೀಡುವ ಪ್ರಸ್ತಾವ ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ನೇತೃತ್ವದಲ್ಲಿ ವೈದ್ಯಕೀಯವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐಕೋಟಾ ಜಾರಿಗೆ ತರುವ ಪ್ರಸ್ತಾವ ವೈದ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ಸರ್ಕಾರದ ಈ ನಿರ್ಧಾರ ಸಂವಿಧಾನ ಬಾಹಿರ, ಸಹಜ ನ್ಯಾಯಕ್ಕೆ ವಿರುದ್ಧ. ಇಂತಹ ಕ್ರಮ ವೈದ್ಯಕೀಯ ಶಿಕ್ಷಣವನ್ನು ಮತ್ತಷ್ಟು ವ್ಯಾಪಾರೀಕರಣಗೊಳ್ಳುತ್ತದೆ ಎಂದ ಆತಂಕ ವ್ಯಕ್ತಪಡಿಸಿದರು.

ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಇರುವ ಏಕೈಕ ಆಸರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು. ಎನ್ಆರ್ಐ ಕೋಟಾ ಜಾರಿಯಾದರೆ ಸೀಟು ಕಡಿಮೆಯಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದರು.

ADVERTISEMENT

ಕೋಟಾ ಜಾರಿಯಾದಲ್ಲಿ ಹಣ ನೀಡುವವರಿಗೆ ವೈದ್ಯಕೀಯ ಶಿಕ್ಷಣ ಸೀಮಿತವಾಗುತ್ತದೆ. ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತದೆ.
ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ಶೇ 300ರಿಂದ 600ರಷ್ಟು ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಪದವಿ ಕೋರ್ಸ್‌ಗಳ ಶುಲ್ಕ ₹17 ಸಾವಿರದಿಂದ ₹50 ಸಾವಿರ ಹೆಚ್ಚಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ₹40 ಸಾವಿರದಿಂದ ₹3.5 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ದೂರಿದರು.

ಸಂಘಟನೆಯ ಮುಖಂಡರಾದ ರಾಜೇಶ್ ಭಟ್, ಡಾ.ವಸುದೇಂದ್ರ, ಡಾ.ಇಶಾ ಡಾ.ಅಮೀರ್, ಹಮೀದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.