ADVERTISEMENT

ಬಗರ್‌ಹುಕುಂ ರೈತರ ಸಮಸ್ಯೆ ಬಗೆಹರಿಸಿ

ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 3:14 IST
Last Updated 13 ಆಗಸ್ಟ್ 2022, 3:14 IST
ಬಗರ್‌ಹುಕುಂ ಹೋರಾಟ ಸಮಿತಿಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಬಗರ್‌ಹುಕುಂ ಹೋರಾಟ ಸಮಿತಿಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಬಿಜೆಪಿ ಸರ್ಕಾರ ಬಗರ್‌ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ರೈತರ ಮೇಲೆ ಕಿರುಕುಳ ನೀಡುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ತಿಳಿಸಿದರು.

ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಬಗರ್‌ಹುಕುಂ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಇವರೆಗೂ ಪರಿಹಾರ ಮಾಡಲು ಮುಂದಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲೆಯಲ್ಲಿ ರೈತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಸುಮಾರು ಮೂರು ಸಾವಿರ ರೈತರ ಮೇಲೆ ಇದುವರೆಗೂ ಕೇಸು ಹಾಕಲಾಗಿದೆ. ರೈತರ 80 ಸಾವಿರ ಅರ್ಜಿಗಳನ್ನು ಯಾವ ವಿಚಾರಣೆ ಮಾಡದೆ, ಪರಿಶೀಲನೆ ನಡೆಸದೇ ವಜಾ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

ಬಿ.ಎಸ್.ಯಡಿಯೂರಪ್ಪನವರು ಒಮ್ಮೆ ಸದನದಲ್ಲಿ ಅರಣ್ಯಾಧಿಕಾರಿಗಳ ದೌರ್ಜನ್ಯ ವಿರೋಧಿಸಿದ್ದರು. ಬಗರ್‌ಹುಕುಂದಾರರಿಗೆ ರಕ್ಷಣೆ ನೀಡುವುದಾಗಿ ಹೇಳಿದ್ದರು. ಆದರೆ, ಅವರ ಹೇಳಿಕೆ ಸದನದಲ್ಲಿ ಹಾಗೂ ಕಡತದಲ್ಲಿಯೇ ಉಳಿದಿದೆ. ನೋಟಿಸ್ ಕೊಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಮಂತ್ರಿಗಳ ಮಾತು ಕೇಳದ ಸ್ಥಿತಿಯಲ್ಲಿ ಅಧಿಕಾರಿಗಳು ತಲುಪಿದ್ದಾರೆ ಎಂದರು.

ಭೂ ಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದರು ಕೂಡ ಅದು ಅನುಷ್ಠಾನಗೊಂಡಿಲ್ಲ. ಬೆಂಗಳೂರು ಬಿಟ್ಟು ಆಯಾ ಭಾಗದ ಸ್ಥಳೀಯ ನ್ಯಾಯಾಲಯಗಳಲ್ಲಿಯೇ ವಿಚಾರಣೆ ನಡೆಯಬೇಕು ಎಂಬ ಆದೇಶವಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಬಗರ್‌ಹುಕುಂದಾರರಿಗೆ ರಕ್ಷಣೆ ನೀಡಬೇಕು. ಅವರ ಬಹುಕಾಲದ ಬೇಡಿಕೆಯಾದ ಸಾಗುವಳಿ ದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ್ ಭೈರಾಪುರ, ಷಣ್ಮುಖಪ್ಪ, ಪರಶುರಾಮ್, ಅಶೋಕ್, ಬೂದಪ್ಪ, ಬಸವರಾಜಪ್ಪ, ರಾಮಚಂದ್ರಪ್ಪ, ಮಹಾದೇವಪ್ಪ, ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.