ADVERTISEMENT

ಆನವಟ್ಟಿ: ನದಿ, ಕೆರೆ ಪಾತ್ರದ ಗ್ರಾಮಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:02 IST
Last Updated 26 ಜುಲೈ 2021, 4:02 IST
ಮೆಸ್ಕಾಂ ಸಿಬ್ಬಂದಿಯೊಬ್ಬರು ಜಲಾವೃತಗೊಂಡಿರುವ ಕೆರೆ ಅಂಗಳದಲ್ಲಿರುವ ಟ್ರಾನ್ಸ್‌ಫಾರ್ಮರ್ ದುರಸ್ತಿ ಗೊಳಿಸಿದರು
ಮೆಸ್ಕಾಂ ಸಿಬ್ಬಂದಿಯೊಬ್ಬರು ಜಲಾವೃತಗೊಂಡಿರುವ ಕೆರೆ ಅಂಗಳದಲ್ಲಿರುವ ಟ್ರಾನ್ಸ್‌ಫಾರ್ಮರ್ ದುರಸ್ತಿ ಗೊಳಿಸಿದರು   

ಆನವಟ್ಟಿ: ಧಾರಾಕಾರ ಮಳೆಗೆ ದಂಡಾವತಿ ಹಾಗೂ ವರದಾ ನದಿ ಮೈದುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕೆ ತಲುಪಿರುವುದರಿಂದ ಆನವಟ್ಟಿ ಹಾಗೂ ಜಡೆ ಹೋಬಳಿ ಸುತ್ತಲ ಗ್ರಾಮಗಳ ಜನರ ಬದುಕು ಅಸ್ತವ್ಯಸ್ತಗೊಂಡಿದೆ.

ವರದಾ ನದಿಯ ದಡದ ಮೇಲೆ ಇರುವ ಜೈನ ಮಠಕ್ಕೆ ನೀರು ಹೊಕ್ಕು ಮಠದ ಶಾಲೆ ದೇವಾಲಯಗಳು ವಸತಿ ನಿಲಯ ಜಲಾವೃತವಾಗಿವೆ. ಹಿರೇಚೌಟಿ ಗ್ರಾಮದ ಬಸ್ತಿಕಟ್ಟೆ ಕೆರೆ ಏರಿ ಒಡೆದು ನೂರಾರು ಎಕರೆ ಗದ್ದೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ.

ಚಿಕ್ಕ ಇಡಗೋಡು ಗ್ರಾಮದ ಕೆರೆ ಏರಿ ಸೀಳಿಕೊಂಡು ನೀರು ಗದ್ದೆಗಳಿಗೆ ನುಗ್ಗಿದೆ. ಗದ್ದೆಗಳ ಹಾಳೆಗಳಿಗೆ ಹಾಕಿರುವ ಕಟ್ಟೆಗಳು ಕಿತ್ತುಹೋಗಿ ಭತ್ತದ ಬೆಳೆ ನಾಶವಾಗಿದೆ. ‘ಕಳೆದ ವರ್ಷವೂ ಹೀಗೆಯೇ ಆಗಿತ್ತು. ಅಧಿಕಾರಿಗಳು ಪರಿಶೀಲನೆ ಮಾಡಿ ಯಾವುದೇ ದುರಸ್ತಿ ಕಾರ್ಯ ಮಾಡಲಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

3ರಿಂದ 4 ಕಿ.ಮೀ.ವರೆಗೆ ಕುಣೇತೆಪ್ಪ, ಹಂಚಿ ಗ್ರಾಮಗಳಲ್ಲಿ ಮೂಡಿ ಏತ ನೀರಾವರಿ ಕಾಮಗಾರಿಗಾಗಿ ಪೈಪ್‌ಲೈನ್ ಕಾಲುವೆ ನಿರ್ಮಾಣ ಮಾಡಿದ್ದು, ಪೈಪ್‌ಗಳನ್ನು ಹಾಕಿದ ನಂತರ ಕಾಲುವೆಗೆ ಮಣ್ಣು ಸರಿಯಾಗಿ ಹಾಕದೆ ಇರುವುದರಿಂದ ಧಾರಾಕಾರ ಮಳೆಗೆ ಕಾಲುವೆ ಮಣ್ಣು ಕುಸಿದಿದೆ.

ಮಳೆ ನಡುವೆಯೇ ಕೆರೆ ನೀರು ತುಂಬಿರುವ, ಕೆರೆ ಅಂಗಳದಲ್ಲಿರುವ ಟಾನ್ಸ್‌ಫಾರ್ಮರ್ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಮೆಸ್ಕಾಂ ಸಿಬ್ಬಂದಿ ಸೇವೆ ಜನರ ಮೆಚ್ಚುಗೆಗೆ ಕಾರಣವಾಗಿದೆ.

ದಂಡಾವತಿ ವರದಾ ಸಂಗಮ ಕ್ಷೇತ್ರ ಬಂಕಸಾಣ ಗ್ರಾಮದಲ್ಲಿ ನೆರೆ ಹಾವಳಿಯಿಂದ 5 ಕುಟುಂಬಗಳ 35 ಜನರನ್ನು ಜಡೆ ಸರ್ಕಾರಿ ಪ್ರೌಢಶಾಲೆ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಭಾನುವಾರ ಶಾಸಕ ಕುಮಾರ್ ಬಂಗಾರಪ್ಪ ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ನದಿ ಹಾಗೂ ಕೆರೆ ಪಾತ್ರದಲ್ಲಿ ಇರುವ ಗ್ರಾಮಗಳಾದ ಲಕ್ಕವಳ್ಳಿ, ಬೆನ್ನೂರ್, ಬಂಕಸಾಣ, ಹರಳಿಕೊಪ್ಪ, ಶಕುನವಳ್ಳಿ, ತಲಗುಂದ, ಸಾಬಾರ, ಬಂಕವಳ್ಳಿ, ತುಂಬ್ರಿಕೊಪ್ಪ, ಕೆರೆಹಳ್ಳಿ, ಶಂಕ್ರಿಕೊಪ್ಪ, ಹೊಸಕೊಪ್ಪ, ಹಣಜಿ, ಅಗಸನಹಳ್ಳಿ, ನೆಲ್ಲಿಕೊಪ್ಪ, ಯಲವಾಳ, ಬೆಣ್ಣಿಗೇರಿ, ಜೋಗಿಹಳ್ಳಿ, ಹಂಚಿ, ಕುಣೇತೆಪ್ಪ, ಚಿಕ್ಕಇಡಗೋಡು, ಹುರುಳಿ, ಭಾರಂಗಿ ಗ್ರಾಮಗಳು ಜಲಾವೃತಗೊಂಡು ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಹಾಗೂ ಮನೆಗಳು ಕುಸಿದುಬಿದ್ದಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.