ADVERTISEMENT

ಎಂಪಿಎಂ ಮುಚ್ಚುವ ಪ್ರಸ್ತಾವ ತಿರಸ್ಕರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 8:08 IST
Last Updated 21 ಅಕ್ಟೋಬರ್ 2021, 8:08 IST

ಭದ್ರಾವತಿ: ‘ರಾಜ್ಯ ಕಾರ್ಮಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಒಪ್ಪಿಗೆ ಕೊಟ್ಟಿರುವ ರೀತಿಯಲ್ಲಿ ಎಂಪಿಎಂ ಮುಚ್ಚುವ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಬಾರದು’ ಎಂದು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಆಗ್ರಹಿಸಿದರು.

‘ಎಂಪಿಎಂ ಮುಚ್ಚುವಂತೆ ಅ.7ರಂದು ಕಾರ್ಮಿಕ ಇಲಾಖೆ ಹೊರಡಿಸಿರುವ ಆದೇಶಕ್ಕೆ ಸರ್ಕಾರ ಮಾನ್ಯತೆ ನೀಡದೆ ಅದನ್ನು ಪುನರಾರಂಭಿಸುವ ಕುರಿತು ಆದೇಶ ನೀಡಬೇಕು.
ಕಾರ್ಮಿಕನ ಪತ್ನಿಯಾಗಿ ಆ ಕುಟುಂಬದ ನೋವನ್ನು ಬದುಕಿನಲ್ಲಿ ಕಂಡಿರುವ ನನಗೆ ಅದರ ವಸ್ತುಸ್ಥಿತಿಯ ಅರಿವಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯಿಂದ ನಗರಕ್ಕೆ ಸಿಕ್ಕಿರುವ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಖಾಸಗಿ ಇಲ್ಲವೇ ಸಹಭಾಗಿತ್ವದಲ್ಲಿ ನಿರ್ಧಾರದ ಮೇಲೆ ಸರ್ಕಾರ ಎಂಪಿಎಂ ಆರಂಭಿಸಬೇಕು ಅದರ ಜತೆಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 72 ಕಾರ್ಮಿಕರಿಗೆ ವಿವಿಧ ಇಲಾಖೆಯಲ್ಲಿ ನಿಯುಕ್ತಿ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರ ಕಾರ್ಖಾನೆ ಹೆಸರಿಗೆ ನವೀಕರಿಸಿರುವ ಅರಣ್ಯ ಇಲಾಖೆ ವಿಭಾಗದಲ್ಲೇ ಎಲ್ಲಾ ನೌಕರರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮೈಸೂರು ಕಾಗದ ಕಾರ್ಖಾನೆ ಅಸೋಸಿಯೇಷನ್ ಅಧ್ಯಕ್ಷ ಎಸ್. ಚಂದ್ರಶೇಖರ್, ‘ಕಾರ್ಖಾನೆಯ ಆಗಿನ ಹಾಗೂ ಈಗಿನ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಯಂತ್ರಗಳೂ ಸುಸ್ಥಿತಿಯಲ್ಲಿ ಇಲ್ಲ. ಇದರ ನಡುವೆ ಕಾರ್ಮಿಕ ಇಲಾಖೆಯ ಆದೇಶ ಸರ್ಕಾರ ಜಾರಿ ಮಾಡಿದರೆ ನಮ್ಮ ಬದುಕು ಅತಂತ್ರವಾಗಲಿದೆ. ಸ್ವಯಂ ನಿವೃತ್ತಿ ಪಡೆಯದ 214 ಕಾರ್ಮಿಕರಲ್ಲಿ 144 ಮಂದಿ ಈಗಾಗಲೇ ವಿವಿಧ ಇಲಾಖೆಯಲ್ಲಿ ನಿಯೋಜನೆ ಆಗಿದ್ದು, ಉಳಿದ 72 ಮಂದಿಗೆ ಅದೇ ರೀತಿ ವಿವಿಧ ಇಲಾಖೆ, ನಿಗಮ ಮಂಡಳಿಯಲ್ಲಿ ಖಾಲಿ ಇರುವ ಸ್ಥಳಗಳಿಗೆ ನಿಯೋಜನೆ ಮಾಡಿ ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಮುಖಂಡರಾದ ಬದರಿನಾರಾಯಣ, ಎಸ್.ಕುಮಾರ್, ಜೆ.ಪಿ. ಯೋಗೀಶ್, ಕರಿಯಪ್ಪ ‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.