ADVERTISEMENT

ಸಾಗರ: ಸಾಗರದ ಸಂತೆಯ ಚದುರಿದ ಚಿತ್ರಗಳು...

ಎಂ.ರಾಘವೇಂದ್ರ
Published 15 ಜನವರಿ 2022, 8:20 IST
Last Updated 15 ಜನವರಿ 2022, 8:20 IST
ಸಾಗರದ ನೆಹರೂ ಮೈದಾನದಲ್ಲಿ ಪ್ರತಿ ಗುರುವಾರ ತಾತ್ಕಾಲಿಕವಾಗಿ ನಡೆಯುತ್ತಿರುವ ಸಂತೆ
ಸಾಗರದ ನೆಹರೂ ಮೈದಾನದಲ್ಲಿ ಪ್ರತಿ ಗುರುವಾರ ತಾತ್ಕಾಲಿಕವಾಗಿ ನಡೆಯುತ್ತಿರುವ ಸಂತೆ   

ಸಾಗರ: ಕೋವಿಡ್ ಕಾರಣಕ್ಕೆ ಲಾಕ್‌ಡೌನ್ ವಿಧಿಸಿದ ನಂತರ ನಗರದ ಸಂತೆ ವ್ಯಾಪಾರ ಊರಿನ ವಿವಿಧೆಡೆ ಚದುರಿ ಹೋಗಿದೆ. ಸುಮಾರು ಒಂದು ಲಕ್ಷ ಜನಸಂಖ್ಯೆ ಇರುವ ನಗರದ ಜನರಿಗೆ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಅದರ ಬಳಕೆಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಲಾಗಾಯ್ತಿನಿಂದ ನಗರದ ಸಂತೆ ಶಿವಪ್ಪನಾಯಕ ನಗರದ ಮಾರ್ಕೆಟ್ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಇರುವ ಮೈದಾನದಲ್ಲಿ ನಡೆಯುತ್ತಿತ್ತು. ಮೀನು ಹಾಗೂ ಮಾಂಸ ಮಾರಾಟದ ಮಾರುಕಟ್ಟೆಯೂ ಇಲ್ಲಿಯೇ ಇತ್ತು. ವರ್ಷದಿಂದ ವರ್ಷಕ್ಕೆ ಸಂತೆಗೆ ಬರುವ ವ್ಯಾಪಾರಸ್ಥರು ಹಾಗೂ ಗ್ರಾಹಕರ ಸಂಖ್ಯೆ ಹೆಚ್ಚಿದ ಕಾರಣ ಸಂತೆಗೆ ಮೀಸಲಾದ ಮೈದಾನವನ್ನು ಮೀರಿ ಅಕ್ಕಪಕ್ಕದ ರಸ್ತೆಗಳನ್ನು ಸಂತೆ ಆಕ್ರಮಿಸುವಂತಾಯಿತು.

ಇದರಿಂದಾಗಿ ಸಂತೆಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿಬಂತು. ಇದರ ಫಲವಾಗಿ ಈಗ್ಗೆ ಆರು ವರ್ಷಗಳ ಹಿಂದೆ ಎಪಿಎಂಸಿಯಿಂದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಪ್ರದೇಶದಲ್ಲಿ ₹6 ಕೋಟಿ ವೆಚ್ಚದಲ್ಲಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ.

ADVERTISEMENT

ಕಾಲೇಜಿನ ಪಕ್ಕದಲ್ಲೇ ಸಂತೆ ಮಾರುಕಟ್ಟೆ ನಿರ್ಮಿಸಿರುವುದು ಸರಿಯಲ್ಲ ಎಂದು ಕೆಲವರು ತಗಾದೆ ತೆಗೆದ ಕಾರಣದಿಂದ ಇಲ್ಲಿಯವರೆಗೂ ಎಪಿಎಂಸಿ ನಿರ್ಮಿಸಿರುವ ಸಂತೆ ಮಾರುಕಟ್ಟೆ ಉಪಯೋಗಕ್ಕೆ ಬಾರದಂತಾಗಿದೆ.

ಸಾಗರದ ಸಂತೆಗೆ ದಾವಣಗೆರೆ, ಶಿಕಾರಿಪುರ, ಹೊನ್ನಾಳಿ, ಶಿರಾಳಕೊಪ್ಪ, ಆನವಟ್ಟಿ, ಸೊರಬ, ಚಿಕ್ಕಮಗಳೂರು ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬರುತ್ತಾರೆ. ಪ್ರತಿವಾರದ ಬುಧವಾರ ರಾತ್ರಿಯೇ ವ್ಯಾಪಾರಸ್ಥರು ತರಕಾರಿಗಳೊಂದಿಗೆ ಇಲ್ಲಿಗೆ ಬಂದು ನೆಲೆಸುತ್ತಾರೆ.

ಪ್ರತಿ ಗುರುವಾರ ಬೆಳಗಿನ ಜಾವ ಮೂರರ ವೇಳೆಗೆ ಇಂದಿರಾಗಾಂಧಿ ಕಾಲೇಜಿನ ಪಕ್ಕದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಮಾರಾಟದ ವಹಿವಾಟು ಆರಂಭಗೊಳ್ಳುತ್ತದೆ. ಬೆಳಿಗ್ಗೆ 7ರೊಳಗೆ ಈ ವಹಿವಾಟು ಮುಗಿದು 8 ಗಂಟೆಯಿಂದ ಚಿಲ್ಲರೆ ವ್ಯಾಪಾರ ಬೇರೆಡೆ ಆರಂಭವಾಗುತ್ತದೆ.

ಕೋವಿಡ್ ನಿರ್ಬಂಧದ ಕಾರಣ ಒಂದೇ ಪ್ರದೇಶದಲ್ಲಿ ಸಂತೆ ಮಾಡಬಾರದು ಎಂಬ ನಿಬಂಧನೆ ವಿಧಿಸಲಾಗಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಊರಿನ ನಾಲ್ಕೂ ದಿಕ್ಕುಗಳಲ್ಲೂ ತರಕಾರಿ ವ್ಯಾಪಾರಸ್ಥರು ತಮ್ಮ ವಹಿವಾಟು ನಡೆಸುತ್ತಿದ್ದು, ಸಂತೆ ಚದುರಿ ಹೋಗಿದೆ.

ನಗರದ ನೆಹರೂ ಮೈದಾನ, ಕೋರ್ಟ್ ರಸ್ತೆ, ಜನ್ನತ್ ನಗರಕ್ಕೆ ಹೋಗುವ ರಸ್ತೆ, ಕೆಳದಿ ರಸ್ತೆ ದುರ್ಗಾಂಬಾ ವೃತ್ತ, ಸೊರಬ ರಸ್ತೆಯ ಸಿದ್ದೇಶ್ವರ ಶಾಲೆ ಎದುರು, ಜೋಗ ರಸ್ತೆ ಹೀಗೆ ವಿವಿಧ ಬಡಾವಣೆಗಳಲ್ಲಿ ತರಕಾರಿ ವ್ಯಾಪಾರಸ್ಥರು ಸಂತೆಯ ದಿನ ವ್ಯಾಪಾರ ನಡೆಸುತ್ತಿದ್ದಾರೆ.

ಪ್ರತಿವರ್ಷ ಇಲ್ಲಿನ ನಗರಸಭೆಗೆ ಸಂತೆ ಮಾರುಕಟ್ಟೆ ಹರಾಜಿನ ವಹಿವಾಟಿನಿಂದ ಸುಮಾರು ₹ 15 ಲಕ್ಷ ಆದಾಯ ಬರುತ್ತಿದೆ. ಆದರೆ ಈ ಆದಾಯದಿಂದ ವ್ಯಾಪಾರಸ್ಥರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂಬ ದೂರು ಇದೆ. ಬಿಸಿಲು, ಮಳೆಯಿಂದ ತರಕಾರಿ ವ್ಯಾಪಾರಸ್ಥರು ತಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಸಂತೆಯ ಹಿಂದಿನ ದಿನವೇ ಬೇರೆ ಬೇರೆ ಊರುಗಳಿಂದ ಬರುವ ವ್ಯಾಪಾರಸ್ಥರು, ಬೆಳೆಗಾರರು ಯಾವುದೋ ಅಂಗಡಿಯ ಕಟ್ಟೆಯ ಮೇಲೆ ಮಲಗಿ, ಬಯಲಲ್ಲಿ ಶೌಚ ಮಾಡಿ ವ್ಯಾಪಾರಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಇದೆ. ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ.

ಇಂದಿರಾಗಾಂಧಿ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ₹ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂತೆ ಮಾರುಕಟ್ಟೆಯನ್ನು ಮುಂದೆ ಯಾವುದಕ್ಕೆ ಬಳಸಬೇಕು ಎನ್ನುವ ಜಿಜ್ಞಾಸೆ ಈಗ ಎದುರಾಗಿದೆ. ಗುರುವಾರದ ಬದಲು ಭಾನುವಾರ ಸಂತೆ ಮಾಡಿದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂಬ ವಾದವಿದೆ.

ಆದರೆ ಸಂತೆಯ ದಿನ ಬದಲು ಮಾಡಿದರೆ ಅಕ್ಕಪಕ್ಕದ ಊರುಗಳಲ್ಲಿ ಸಂತೆ ಮುಗಿಸಿ ಗುರುವಾರ ಇಲ್ಲಿಗೆ ಬರುವವರಿಗೆ ಅನಾನುಕೂಲ ಎಂಬ ಅಂಶವೂ ಇಲ್ಲಿ ಅಡಗಿದೆ. ಇಂದಿರಾಗಾಂಧಿ ಕಾಲೇಜಿನ ಪಕ್ಕದ ಸಂತೆ ಮಾರುಕಟ್ಟೆಗೆ ತೆರಳಲು ಮುಖ್ಯ ರಸ್ತೆಯ ಬದಲಾಗಿ ಪರ್ಯಾಯ ರಸ್ತೆ ನಿರ್ಮಿಸಿದರೆ ಗುರುವಾರ ಸಂತೆ ನಡೆದು ವಿದ್ಯಾರ್ಥಿಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ. ಯಾವುದಕ್ಕೂ ತಾಲ್ಲೂಕು ಆಡಳಿತ ಈ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂಬುದು ಸ್ಥಳೀಯರು, ವ್ಯಾಪಾರಿಗಳ ಒತ್ತಾಯ.

***

ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ನೀಡುವ ಮೂಲಕ ಎಪಿಎಂಸಿ ತನ್ನ ಜವಾಬ್ಧಾರಿಯನ್ನು ನಿರ್ವಹಿಸಿದೆ. ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವ ಜವಾಬ್ಧಾರಿ ಸ್ಥಳೀಯ ಆಡಳಿತದ ಮೇಲಿದೆ.

ಚೇತನ್ ರಾಜ್ ಕಣ್ಣೂರು, ಎಪಿಎಂಸಿ ಅಧ್ಯಕ್ಷ

***

ಕೋವಿಡ್ ಕಾರಣಕ್ಕೆ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಸಂತೆ ನಡೆಸುವ ತೀರ್ಮಾನ ಸರಿ ಇದೆ. ಆದರೆ ಕೋವಿಡ್ ಇಲ್ಲದ ಸಂದರ್ಭದಲ್ಲಿ ವ್ಯವಸ್ಥಿತ ಸೌಲಭ್ಯವಿರುವ ಇಂದಿರಾಗಾಂಧಿ ಕಾಲೇಜು ಪಕ್ಕದ ಸಂತೆ ಮಾರುಕಟ್ಟೆಯಲ್ಲೆ ಸಂತೆ ನಡೆಸುವುದು ಸೂಕ್ತ.

ಗಣಪತಿ ಮಂಡಗಳಲೆ, ನಗರಸಭೆ ವಿರೋಧಪಕ್ಷದ ನಾಯಕ

***

ಕೋವಿಡ್ ನಿರ್ಬಂಧ ಇರುವ ಕಾರಣಕ್ಕೆ ಸಂತೆ ಬೇರೆ ಬೇರೆ ಕಡೆ ನಡೆಯುತ್ತಿದೆ. ನಿರ್ಬಂಧ ಮುಕ್ತಾಯವಾದ ನಂತರ ಇಂದಿರಾಗಾಂಧಿ ಕಾಲೇಜಿನ ಪಕ್ಕದಲ್ಲಿನ ಸಂತೆ ಮಾರುಕಟ್ಟೆಯಲ್ಲೆ ಸಂತೆ ನಡೆಯಲಿದೆ. ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಡಿವೈಡರ್ ಅಳವಡಿಸಲಾಗುವುದು.

ಮಧುರಾ ಶಿವಾನಂದ್, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.