ADVERTISEMENT

ಈ ಶಾಲೆಗೆ ಕೆರೆಯಷ್ಟೆ ಸೇವೆಯ ಹರವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 9:40 IST
Last Updated 1 ಜುಲೈ 2012, 9:40 IST

ತಿಪಟೂರು: ದೊಡ್ಡ ಕೆರೆಯೊಂದಿಗೆ ತನ್ನ ಹೆಸರು ಬೆಸೆದುಕೊಂಡಿರುವ ನೊಣವಿನಕೆರೆ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ. ಇಲ್ಲಿನ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗೆ ಬಹುದೊಡ್ಡ ಕಾಣಿಕೆ ನೀಡಿರುವ ಕೆರೆಯಂತೆಯೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಸೇವೆ ಹರವು ದೊಡ್ಡದು.

ಭಾನುವಾರ ಶತಮಾನೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವ ಈ ವಿದ್ಯಾಕೇಂದ್ರ ತಾಲ್ಲೂಕಿನ ಪ್ರಥಮ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ! ಇದಕ್ಕೆ ಕತ್ತಿ ಮರದ ಶಾಲೆ ಎಂಬ ಅಡ್ಡ ಹೆಸರು. ಅಷ್ಟರ ಮಟ್ಟಿಗೆ ಈ ಶಾಲೆಯ ಆವರಣ, ಸುತ್ತಮುತ್ತ ಮರ ಆವರಿಸಿದ್ದವು. ಈಗಲೂ ಕತ್ತಿಮರಗಳು ನೆರಳಿನ ಜತೆಗೆ ಶಾಲೆಯ ಇತಿಹಾಸಕ್ಕೆ ಸಾಕ್ಷ್ಯ ನೀಡುತ್ತವೆ.

1895ರಲ್ಲಿ ಬ್ರಿಟಿಷರ ಕಾಲದಲ್ಲಿ ಪ್ರಾಥಮಿಕ ಸಹ ಶಿಕ್ಷಣ ಶಾಲೆಯಾಗಿ ಆರಂಭವಾದ ಇದು ಸಾವಿರಾರು ವಿದ್ಯಾಕಾಂಕ್ಷಿಗಳಿಗೆ ಶಿಕ್ಷಣ, ಬದುಕು ನೀಡಿದೆ. ದಿ.ಪೇಟೆಮನೆ ಚನ್ನಬಸವಯ್ಯ 1913ರಲ್ಲಿ ಮುಖ್ಯ ರಸ್ತೆ ಪಕ್ಕದಲ್ಲೆ ದಾನವಾಗಿ ನೀಡಿದ 2.36 ಎಕರೆ ಜಾಗದಲ್ಲಿ ನೆಲೆ ಕಂಡುಕೊಂಡ ಶಾಲೆ ಕಾಲ ಕ್ರಮೇಣ ವಿಸ್ತಾರವಾಗಿ ಬೆಳೆದಿದೆ.

ಶಾಲೆ ಹೆಚ್ಚುಗಾರಿಕೆಗೆ ತಕ್ಕಂತೆ ಪದವೀಧರ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಬಹುತೇಕ ಎಲ್ಲ ವಿಷಯಗಳಿಗೂ ಪ್ರತ್ಯೇಕ ಶಿಕ್ಷಕರಿದ್ದಾರೆ. ಚಿತ್ರಕಲೆ, ಸಂಗೀತ, ಕಂಪ್ಯೂಟರ್, ದೈಹಿಕ ಶಿಕ್ಷಣ ಶಿಕ್ಷಕರನ್ನೂ ಹೊಂದಿದೆ. ಪಕ್ಕದಲ್ಲೇ ವಿಶಾಲವಾದ ಆಟದ ಮೈದಾನ, ಬಯಲು ರಂಗ ಮಂದಿರ ಮಕ್ಕಳ ಚಟುವಟಿಕೆಗಳಿಗೆ ಪೂರಕವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.